ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!

#Mundagod #Harvest #Maize

ಮುಂಡಗೋಡ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಗೋವಿನಜೋಳದ (ಮೆಕ್ಕೆಜೋಳ) ಫಸಲನ್ನು ಒಕ್ಕಲು (ಕೊಯ್ಲು) ಮಾಡಲು ರೈತರು ಪರದಾಡುತ್ತಿದ್ದಾರೆ. ಇತ್ತ ನಾಟಿ ಮಾಡಿದ ಭತ್ತದ ಬೆಳೆಗೆ ಮಳೆ ಅನುಕೂಲಕರವಾಗಿದೆ.

ಗೋವಿನ ಜೋಳದ ಬೆಳೆ ಮಾಗಿದ್ದು ಕೊಯ್ಲಿಗೆ ಸಜ್ಜಾಗಿದೆ. ಕಳೆದ 10 ದಿನಗಳಿಂದ ರೈತರು ತಾಲೂಕಿನಲ್ಲಿ ಶೇ. 60ರಷ್ಟು ಗೋವಿನ ಜೋಳದ ಬೆಳೆಯನ್ನು ಕೂಲಿಕಾರರಿಂದ ಕೊಯ್ಲು ಮಾಡಿಸಿ ಸಣ್ಣ ಯಂತ್ರಗಳಿಂದ ಕಾಳು ಬೇರ್ಪಡಿಸುತ್ತಿದ್ದಾರೆ. ಇನ್ನು ಕೆಲ ರೈತರು ಕೂಲಿಕಾರರ ಕೊರತೆ ಹಾಗೂ ಮಳೆಯಿಂದಾಗಿ ದೊಡ್ಡ ಯಂತ್ರ (ಹಾರ್ವೆಸ್ಟರ್)ಗಳ ಮೂಲಕ ಕಾಳು ಬೇರ್ಪಡಿಸಿ ಖಾಲಿ ಜಾಗ ಹಾಗೂ ರಸ್ತೆ ಅಕ್ಕ-ಪಕ್ಕ ಹಾಕಿದ್ದಾರೆ.

ಅಲ್ಲದೆ, ಮೇಲಿಂದ ಮೇಲೆ ಮಳೆ ಆಗುತ್ತಿರುವುದರಿಂದ ಭತ್ತದ ತೆನೆಗಳು ನೆಲಕಚ್ಚುತ್ತಿವೆ. ನೆಲಕಚ್ಚಿದ ಭತ್ತದ ಪೈರಿನಿಂದ ಫಸಲು ಪಡೆಯುವುದು ತುಂಬಾ ಕಷ್ಟವಾಗಿದೆ. ನೀರಿನಲ್ಲಿ ತೇಲುತ್ತಿರುವ ಭತ್ತದಿಂದ ಜಾನುವಾರುಗಳಿಗೆ ಹುಲ್ಲೂ ಸಿಗುವುದಿಲ್ಲ. ಯಂತ್ರಗಳ ಮೂಲಕ ಕಟಾವು ಮಾಡಲು ತೊಂದರೆ ಆಗುತ್ತದೆ. ಹೀಗಾಗಿ ನೆಲಕಚ್ಚಿರುವ ಭತ್ತದ ಬೆಳೆಯನ್ನು ಕೂಲಿಕಾರರಿಂದಲೇ ಕಟಾವು ಮಾಡಬೇಕು. ಆದರೆ, ತಾಲೂಕಿನಲ್ಲಿ ಕೂಲಿಕಾರರ ಅಭಾವವಿದೆ ಎಂಬುದು ರೈತರ ಅಳಲು.

ನಾಟಿ ಮಾಡಿದ ಭತ್ತದ ಬೆಳೆ ಹೊರತುಪಡಿಸಿ ಕೂರಿಗೆಯಿಂದ ಬಿತ್ತನೆ ಮಾಡಿದ ಭತ್ತದ ಪೈರು ಈಗಾಗಲೇ ಕೊಯ್ಲಿಗೆ ಬಂದಿದೆ. ಇದೇ ವೇಳೆ ಮಳೆ ಜಾಸ್ತಿ ಯಾಗಿದ್ದರಿಂದ ಭತ್ತ ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

| ಮಂಜುನಾಥ ಶೇಟ್ ಕುಂದರಗಿ ರೈತ

ಆರಂಭದಲ್ಲಿ ಬಿಡುವಿಲ್ಲದೆ ಸುರಿದ ಮಳೆಯಿಂದ ಗೋವಿನ ಜೋಳದ ಬೆಳೆ ಕುಂಠಿತಗೊಂಡು ಇಳುವರಿ ಕಡಿಮೆಯಾಯ್ತು. ಈಗ ತೆನೆ ಕೊಯ್ಯುವಾಗ ಮತ್ತೆ ಮಳೆ ಕಾಡುತ್ತಿದೆ. ಮೊದಲು ಹೊಲದಲ್ಲಿಯೇ ಕಣಗಳನ್ನು ಮಾಡಿ ಕಾಳು ಒಣಗಿಸುತ್ತಿದ್ದೆವು. ಆದರೆ, ಈಗ ಮಳೆಯ ಕಾರಣದಿಂದ ರಸ್ತೆ ಬದಿ, ಎಪಿಎಂಸಿ ಆವರಣದಲ್ಲಿ ಕಾಳುಗಳನ್ನು ಒಣಗಿಸಬೇಕಿದೆ.

| ಗಿರೀಶ ಆರೆಗೊಪ್ಪ ಸನವಳ್ಳಿ ರೈತ