ಬೆಂಗಳೂರು: ಕನ್ನಡದಲ್ಲಿ ಮೊದಲು ಸಿನಿಮಾಗಳಲ್ಲಿ ನಟಿಸಿ ನಂತರ ಡೈರೆಕ್ಟರ್ ಕ್ಯಾಪ್ ಧರಿಸಿರುವ ನಿರ್ದೇಶಕಿಯರ ಪಟ್ಟಿಯೇ ಇದೆ. ಇದರಲ್ಲಿ ವಿಜಯಲಕ್ಷ್ಮೀ ಸಿಂಗ್, ರೂಪಾ ಅಯ್ಯರ್, ಅಪೂರ್ವ, ರಂಜಿನಿ ರಾಘವನ್ ಪ್ರಮುಖರು. ಈ ಪಟ್ಟಿಗೆ ಹೊಸ ಸೇರ್ಪಡೆ ನಟಿ ಹರ್ಷಿಕಾ ಪೂಣಚ್ಚ. ಕನ್ನಡ, ಕೊಡವ, ಬಂಗಾಳಿ, ತಮಿಳು, ಮಲಯಾಳಂ, ಭೋಜಪುರಿ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ಹರ್ಷಿಕಾ, ಇದೀಗ ‘ಚಿ. ಸೌಜನ್ಯ’ ಮೂಲಕ ನಿರ್ದೇಶಕಿಯ ಜವಾಬ್ದಾರಿ ಹೊರುತ್ತಿದ್ದಾರೆ. ಇತ್ತೀಚೆಗೆ ಟೈಟಲ್ ರಿವೀಲ್ ಮಾಡಲಾಗಿದ್ದು, ಚಿತ್ರಕ್ಕೆ ‘ಒಂದು ಹೆಣ್ಣಿನ ಕಥೆ’ ಎಂಬ ಅಡಿಬರಹ ಇದೆ. ಹರ್ಷಿಕಾ ಪತಿ ನಟ ಭುವನ್ ಭುವನ್ ಎಂಟರ್ಟೈನ್ಮೆಂಟ್ ಹಾಗೂ ಕಂಸಾಳೆ ಫಿಲಂಸ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಬಹುಭಾಷೆ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಉಗ್ರಂ ಮಂಜು, ಕಾಕ್ರೋಚ್ ಸುಧೀ, ಯಶ್ ಶೆಟ್ಟಿ ತಾರಾ ಬಳಗದಲ್ಲಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬರಲಿದೆ. ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು. ಭುವನ್ ಪೊನ್ನಣ್ಣ, ‘ದೇಶದಲ್ಲಿ ಪ್ರತಿ ವರ್ಷ 36 ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಈ ಪ್ರಕರಣಗಳು ದಾಖಲಾಗುತ್ತವೆ ಆದರೆ, ನ್ಯಾಯ ಸಿಕ್ಕಿರುವುದು ತೀರಾ ಕಡಿಮೆ. ಕೆಲ ಪ್ರಕರಣಗಳಲ್ಲಿ ನಾನು, ಹರ್ಷಿಕಾ ಸಂತ್ರಸ್ತರ ಪರ ನಿಂತು ಹೋರಾಟ ಮಾಡಿದ್ದೇವೆ. ಆದರೆ, ಇಂತಹ ವಿಷಯಗಳ ಕುರಿತು ಜನರಿಗೆ ಇನ್ನು ಜಾಗೃತಿ ಮೂಡಿಸಲು ಸಿನಿಮಾ ಉತ್ತಮ ಮಾಧ್ಯಮ ಎನಿಸಿ, ಈ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ಮಹಿಳೆಯರ ಮೇಲೆ ನಡೆಯುವ ಶೋಷಣೆ ಕುರಿತು ಜಾಗೃತಿ ಮೂಡಿಸುವುದು ಚಿತ್ರದ ಉದ್ದೇಶ’ ಎಂದು ಮಾಹಿತಿ ನೀಡಿದರು.
ಅಮಾನುಷ ಘಟನೆಗಳ ಸುತ್ತ: ಹರ್ಷಿಕಾ ಪೂಣಚ್ಚ, ‘ಇದು ಯಾವುದೋ ಒಂದು ಘಟನೆಯ ಚಿತ್ರವಲ್ಲ. ದೇಶದಲ್ಲಿ ನಡೆಯುತ್ತಿರುವ ಇಂತಹ ಅಮಾನುಷ ಘಟನೆಗಳನ್ನಿಟ್ಟುಕೊಂಡು ಮಾಡುತ್ತಿರುವ ಸಿನಿಮಾ. ನಮ್ಮ ಚಿತ್ರದ ನಾಯಕಿ ಹೆಸರು ಸೌಜನ್ಯ ಅಷ್ಟೇ. ಕಥೆ ಕೇಳಿದ ತಕ್ಷಣ ಕಿಶೋರ್ ನಟಿಸಲು ಒಪ್ಪಿಕೊಂಡರು. ಚಿತ್ರೀಕರಣ ಆರಂಭವಾಗಲು ಇನ್ನೆರೆಡು ತಿಂಗಳು ಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ’ ಎಂದರು.
ಪೊಲೀಸ್ ಅಧಿಕಾರಿ ಪಾತ್ರ: ನಟ ಕಿಶೋರ್, ‘ದೇಶದಲ್ಲಿ ಇಂತಹ ಘಟನೆಗಳು ನಡೆದರೂ ನಮ್ಮ ಮನೆಯದಲ್ಲ ಎಂದು ಸುಮ್ಮನಿರುತ್ತೇವೆ. ಆದರೆ, ಆಕೆ ಕೂಡ ಒಬ್ಬರ ಮಗಳು, ಸಹೋದರಿ ಆಗಿರುತ್ತಾಳೆ ಅಂತ ನಾವು ಯೋಚಿಸಬೇಕು. ಇಂತಹ ವಿಷಯಗಳನ್ನು ಸಿನಿಮಾ ಮಾಡಿದಾಗ ಅದು ಬೇಗ ಜನರಿಗೆ ತಲುಪುತ್ತವೆ. ಇಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದೇನೆ’ ಎಂದು ಮಾಹಿತಿ ನೀಡಿದರು.