ರಜನಿ, ಅಜಿತ್ ಜತೆ ಹರ್ಷಿಕಾಗೆ ನಟಿಸುವಾಸೆ

ಬೆಂಗಳೂರು: ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುವುದರ ಜತಗೆ ಒಂದಷ್ಟು ಕೊಂಕಣಿ, ಕೊಡವ, ತೆಲುಗು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ ಹರ್ಷಿಕಾ ಪೂಣಚ್ಚ. ಇದೀಗ ‘ಉನ್ ಕಾದಲ್ ಇರುಂದಾಲ್’ ಸಿನಿಮಾ ಮೂಲಕ ಮೊದಲ ಬಾರಿಗೆ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಶೀಘ್ರದಲ್ಲೇ ಖ್ಯಾತ ನಟರಾದ ಧನುಷ್, ವಿಜಯ್ ಸೇತುಪತಿ ಆ ಸಿನಿಮಾದ ತಮಿಳು ವರ್ಷನ್ ಟ್ರೇಲರ್ ಲಾಂಚ್ ಮಾಡಿದರೆ, ಮಲಯಾಳಂ ವರ್ಷನ್ ಟ್ರೇಲರ್ ಅನ್ನು ಮಮ್ಮೂಟ್ಟಿ ರಿಲೀಸ್ ಮಾಡಲಿದ್ದಾರೆ. ಇದೆಲ್ಲದರ ನಡುವೆ ಬಹುದಿನಗಳ ಕನಸೊಂದನ್ನು ನಿಜವಾಗಿಸುವ ಹಾದಿಯಲ್ಲಿದ್ದಾರೆ ಹರ್ಷಿಕಾ. ಏನದು ಕನಸು? ‘ಸೂಪರ್ ಸ್ಟಾರ್’ ರಜನಿಕಾಂತ್ ಜತೆ ನಟಿಸುವುದು!

‘ಚಿಕ್ಕಂದಿನಿಂದಲೂ ನಾನು ‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿಮಾನಿ. ಆವಾಗಲೇ ನಾನು ಅವರ ‘ಪಡೆಯಪ್ಪ’ ಚಿತ್ರವನ್ನು 100ಕ್ಕೂ ಅಧಿಕ ಬಾರಿ ನೋಡಿದ್ದೆ. ಇದೀಗ ನನ್ನ ಮೊದಲ ತಮಿಳು ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದೆ. ಮುಂದೊಂದು ದಿನ ಅವರೊಂದಿಗೆ ನಟಿಸುವ ಅವಕಾಶವನ್ನೂ ಗಿಟ್ಟಿಸಿಕೊಳ್ಳುತ್ತೇನೆ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ ಹರ್ಷಿಕಾ. ಕಳೆದ ವರ್ಷವೇ ಶುರುವಾಗಿದ್ದ ‘ಉನ್ ಕಾದಲ್ ಇರುಂದಾಲ್’ ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದೆ. ತಮಿಳಿನಲ್ಲಿ ಮೊದಲ ಸಿನಿಮಾ ಆಗಿರುವುದರಿಂದ ಚಿತ್ರದ ಬಗ್ಗೆ ಎಗ್ಲೈಟ್ಸ್‌ ಆಗಿದ್ದಾರೆ ಹರ್ಷಿಕಾ.

‘ಪ್ರತಿ ಕಲಾವಿದರಿಗೆ ಭಾಷೆ ಎಂಬುದು ಗಡಿ ಅಲ್ಲವೇ ಅಲ್ಲ. ನಟನೆಯೊಂದೇ ಎಲ್ಲದಕ್ಕೂ ಮಾನದಂಡ. ಒಳ್ಳೆಯ ಅವಕಾಶ ಸಿಕ್ಕರೆ ಯಾವ ಚಿತ್ರರಂಗದಲ್ಲಾದರೂ ನಾನು ನಟಿಸುತ್ತೇನೆ. ಮಲಯಾಳಂನಲ್ಲಿ ಈಗಾಗಲೇ ನಟಿಸಿದ್ದೇನೆ. ಇದೀಗ ಕಾಲಿವುಡ್ ಸರಣಿ. ರಜನಿಕಾಂತ್, ಅಜಿತ್, ವಿಜಯ್ ಅವರ ನೆಲಕ್ಕೆ ಕಾಲಿಟ್ಟಿದ್ದೇನೆ. ಅವರೊಂದಿಗೂ ನಟಿಸುವ ಆಸೆ ಇದೆ. ಅದನ್ನೂ ಈಡೇರಿಸಿಕೊಳ್ಳುವ ತವಕದಲ್ಲಿದ್ದೇನೆ’ ಎನ್ನುತ್ತಾರೆ ಹರ್ಷಿಕಾ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯ ‘ಉನ್ ಕಾದಲ್ ಇರುಂದಾಲ್’ ಸಿನಿಮಾಗೆ ಹಷೀಮ್ ನಿರ್ದೇಶನ ಮಾಡಿದ್ದಾರೆ. ಮುಕಾಬುಲಾ ಸಲ್ಮಾನ್ ನಾಯಕನಾದರೆ, ಹರ್ಷಿಕಾ ಹಾಗೂ ಕಸ್ತೂರಿ ನಾಯಕಿಯರಾಗಿದ್ದಾರೆ.