ನಾನಿನ್ನೂ ಮದುವೆ ಬಗ್ಗೆ ಯೋಚನೆ ಮಾಡಿಲ್ಲ: ಹರ್ಷಿಕಾ ಪೂಣಚ್ಚ

ಹುಬ್ಬಳ್ಳಿ: ಬಾಲಿವುಡ್​ನಲ್ಲಿ ನನಗೂ ಮೀ ಟೂ ಅನುಭವ ಆಗಿದೆ. ಹಾಗಾಗಿಯೇ ಅಲ್ಲಿಂದ ಬಂದುಬಿಟ್ಟೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದರು.
ಮಾಧ್ಯಮದ ಜತೆ ಮಾತನಾಡಿ, ಮೀ ಟೂ ಬಗ್ಗೆ ಈಗಾಗಲೇ ಹಲವು ಬಾರಿ ನಾನು ಹೇಳಿಕೆ ನೀಡಿದ್ದೇನೆ. ನಿಜಕ್ಕೂ ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಮೀ ಟೂ ಸಹಾಯಕವಾಗಲಿದೆ. ಆದರೆ ಕೆಲವರು ಇದನ್ನು ಪಬ್ಲಿಸಿಟಿಗೋಸ್ಕರ ಬಳಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಯಾರ ಪರವೂ ಅಲ್ಲ. ನ್ಯಾಯದ ಪರವಾಗಿ ಇರುತ್ತೇನೆ. ಒಂದೊಮ್ಮೆ ನಿಜಕ್ಕೂ ಲೈಂಗಿಕ ದೌರ್ಜನ್ಯವಾಗಿದ್ದರೆ ಆ ಕ್ಷಣಕ್ಕೇ ಪೊಲೀಸ್​ ಠಾಣೆಗೆ ಹೋಗಬೇಕಿತ್ತು, ನಮ್ಮ ಚಿತ್ರರಂಗ ವಾಣಿಜ್ಯ ಮಂಡಳಿ ಇದೆ, ಹಾಗೇ ಮಹಿಳಾ ಆಯೋಗವೂ ಇದೆ. ಅದನ್ನೆಲ್ಲ ಬಿಟ್ಟು ಒಮ್ಮೆಲೆ ಸೋಷಿಯಲ್​ ಮೀಡಿಯಾ, ಮಾಧ್ಯಮದ ಎದುರು ಹೋಗುತ್ತಾರೆ ಎಂದರೆ ಅದು ಪಬ್ಲಿಸಿಟಿ ಅಲ್ಲದೆ ಇನ್ನೇನು ಎಂದು ಹೇಳಿದರು.
ಮದುವೆ ಯೋಚನೆ ಇಲ್ಲ

ನಾನಿನ್ನೂ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಕನ್ನಡ ಚಿತ್ರರಂಗ ನನಗೆ ಹೆಸರು ಕೊಟ್ಟಿದೆ. ಇನ್ನೂ ಸ್ವಲ್ಪ ಸಿನಿಮಾಗಳನ್ನು ಮಾಡಬೇಕು. ಒಳ್ಳೊಳ್ಳೆ ನಟರ ಜತೆ ನಟಿಸಬೇಕು ಎಂಬ ಆಸೆಯಿದೆ. ಅದಾದ ಬಳಿಕ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹರ್ಷಿಕಾ ಹೇಳಿದರು.