ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಮಂಗಳೂರು: ಹರಿಯಾಣದಿಂದ ಕನ್ಯಾಕುಮಾರಿವರೆಗೆ ಒಟ್ಟು ಆರು ಸಾವಿರ ಕಿ.ಮೀ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಏಕತೆ, ಶಾಂತಿ, ಸಹೋದರತೆ ಸಾರುವ ಕಾಯಕಕ್ಕೆ ಹರಿಯಾಣದ ಯುವಕ ಮುಂದಾಗಿದ್ದಾನೆ.

ಹರಿಯಾಣದ ರೇವಡಿ ಜಿಲ್ಲೆ ನಿವಾಸಿ, ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿ, 22ರ ಹರೆಯದ ಚಂದ್ರಪ್ರಕಾಶ್ ಯಾದವ್ ಈ ಸಾಹಸಕ್ಕೆ ಮುಂದಾದವರು. ಸೈಕಲ್‌ನಲ್ಲಿ ಶಾಂತಿ ಸಂದೇಶವನ್ನೊಳಗೊಂಡ ಭಿತ್ತಿಪತ್ರ ಸಹಿತ ಯಾತ್ರೆ ಕೈಗೊಂಡಿರುವ ಅವರು ಮಂಗಳೂರಿಗೆ ತಲುಪಿದ ಸಂದರ್ಭ ವಿಜಯವಾಣಿ ಜತೆ ಮಾತನಾಡಿದರು.
ತನ್ನ ಸೈಕಲ್ ಯಾತ್ರೆಯನ್ನು ಪುಲ್ವಾಮಾದಲ್ಲಿ ಬಲಿದಾನಗೈದ ಯೋಧರಿಗೆ ಅರ್ಪಿಸುತ್ತೇನೆ ಎನ್ನುವ ಚಂದ್ರಪ್ರಕಾಶ್ ಯಾದವ್, ಫೆ.11ರಂದು ಹರಿಯಾಣದ ರೇವಡಿಯಿಂದ ಯಾತ್ರೆ ಆರಂಭಿಸಿದ್ದು, 45 ದಿನಗಳಲ್ಲಿ 2,800 ಕಿ.ಮೀ ಯಾತ್ರೆ ಪೂರೈಸಿದ್ದಾರೆ. ಇನ್ನು 10 ದಿನದಲ್ಲಿ ಕನ್ಯಾಕುಮಾರಿ ತಲುಪಲಿದ್ದಾರೆ. ಈಗಾಗಲೇ ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕದಲ್ಲಿ ಸಂಚರಿಸಿದ್ದಾರೆ. ದಿನಕ್ಕೆ ಸರಾಸರಿ 100 ಕಿ.ಮೀ ಸಂಚರಿಸುವ ಅವರು ರಾತ್ರಿ ವೇಳೆ ದೇವಾಲಯ, ಮಂದಿರಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ.
ಪರಿಸರ ಸಂರಕ್ಷಣೆ, ಮಾದಕ ದ್ರವ್ಯ ತಡೆ ಜಾಗೃತಿ, ಹೆಣ್ಮಮಕ್ಕಳ ರಕ್ಷಣೆ, ಶಿಕ್ಷಣದ ಬಗ್ಗೆ ಶಾಲಾ, ಕಾಲೇಜುಗಳಿಗೆ ತೆರಳಿ ಭಾಷಣ ಮೂಲಕ ಜಾಗೃತಿ ಮೂಡಿಸುತ್ತಾರೆ. ಅಲ್ಲದೆ ಮತದಾನದ ಬಗ್ಗೆಯೂ ಜಾಗೃತಿ ಮೂಡಿಸುವ ಅವರು, ಆಮಿಷಗಳಿಗೆ ಬಲಿಯಾಗದೆ ಸದೃಢ ಭಾರತಕ್ಕಾಗಿ ಮತ ಚಲಾಯಿಸಿ ಎಂಬ ಬಗ್ಗೆಯೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತಾರೆ.

ಸೈಕಲ್ ಯಾತ್ರೆ ಸಂದರ್ಭ ಸಿಗುವ ದೇವಾಲಯ, ಪ್ರಾರ್ಥನಾ ಮಂದಿರ ಹಾಗೂ ಸಮಾಜ ಸೇವಕರನ್ನೂ ಭೇಟಿಯಾಗುತ್ತಾರೆ. ಮಹಾರಾಷ್ಟ್ರದ ರಾಲೇಗಾನ್ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಹಣ, ಮೊಬೈಲ್ ಕಳವಾಯಿತು!: ಸೈಕಲ್ ಸವಾರಿ ಸಂದರ್ಭ ರಾಜಸ್ಥಾನದ ಚಿತ್ತೋರ್‌ಘರ್ ದೇವಾಲಯಲ್ಲಿ ಮಲಗಿದ್ದ ಸಂದರ್ಭ ತನ್ನಲ್ಲಿದ್ದ 500 ರೂ. ಕಳವಾಯಿತು. ಮೊಬೈಲ್ ಕೂಡ ಕಳೆದು ಹೋಯಿತು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದು, ತನ್ನ ಯಾತ್ರೆ ಮುಂದುವರಿಯಲು ಕಾರಣವಾಗಿದೆ ಎಂದು ಚಂದ್ರಪ್ರಕಾಶ್ ಯಾದವ್ ತಿಳಿಸಿದರು.

ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವ ತುಡಿತ ಸೈಕಲ್ ಯಾತ್ರೆಗೆ ಪ್ರೇರಣೆಯಾಯಿತು. ಸಾಮಾನ್ಯ ಕೃಷಿಕ ಕುಟುಂಬದವನಾದ ನಾನು ಸಾಮಾನ್ಯ ಸೈಕಲ್‌ನಲ್ಲೇ ಯಾತ್ರೆ ಕೈಗೊಂಡಿದ್ದೇನೆ. ತೆರಳಿದಲ್ಲೆಲ್ಲ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯಾತ್ರೆಗೆ ಸಹಕಾರ ನೀಡಿದ್ದಾರೆ. ಕನ್ಯಾಕುಮಾರಿಯಿಂದ ಮರಳಿ ಸೈಕಲ್‌ನಲ್ಲೇ ಹರಿಯಾಣ ತೆರಳಲಿದ್ದೇನೆ.
|ಚಂದ್ರಪ್ರಕಾಶ್ ಯಾದವ್

Leave a Reply

Your email address will not be published. Required fields are marked *