ಹರಿಹರನ್‌ಗೆ ವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಲಾದ 25ನೇ ವರ್ಷದ ಆಳ್ವಾಸ್ ವಿರಾಸತ್ ಜನವರಿ 4ರಂದು ಉದ್ಘಾಟನಾ ಸಮಾರಂಭದಲ್ಲಿ ದೇಶದ ಖ್ಯಾತ ಗಾಯಕ ಹರಿಹರನ್ ಅವರಿಗೆ ಆಳ್ವಾಸ್ ವಿರಾಸತ್- 2019 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.

ಜ.4ರಿಂದ 6ರವರೆಗೆ ಮೂಡುಬಿದಿರೆ ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಈ ಬಾರಿಯ ಪ್ರಶಸ್ತಿ ಪಡೆಯುತ್ತಿರುವವರು ಭಾರತೀಯ ಚಲನಚಿತ್ರ ರಂಗದಲ್ಲಿ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾದ ಹರಿಹರ ಅನಂತ ಸುಬ್ರಮಣಿಯನ್. ಇವರು ಹರಿಹರನ್ ಎಂದೇ ಖ್ಯಾತರು. ಗಜಲ್, ಭಕ್ತಿಗೀತೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುವ ಹರಿಹರನ್ ತಮಿಳು, ಹಿಂದಿ, ಮಲಯಾಳಂ, ಕನ್ನಡ, ಮರಾಠಿ, ಭೋಜ್‌ಪುರಿ ಮತ್ತು ತೆಲುಗು ಭಾಷೆಗಳ ಚಲನಚಿತ್ರರಂಗದ ಹಿನ್ನಲೆ ಗಾಯಕರಾಗಿ ಜನಮನ ಗೆದ್ದವರು ಎಂದು ಹೇಳಿದರು.
ಕೇರಳದ ತಿರುವನಂತಪುರದಲ್ಲಿ ಜನಿಸಿರುವ ಹರಿಹರನ್ ಸಂಗೀತ ಸಂಯೋಜಕರೂ ಆಗಿದ್ದು, 30ಕ್ಕಿಂತಲೂ ಅಧಿಕ ಗಜಲ್ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. 1996ರಲ್ಲಿ ‘ಕಲೋನಿಯಲ್ ಕಸಿನ್ಸ್’ ಎಂಬ ಆಲ್ಬಂ ಅನ್ನು ಖ್ಯಾತ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ ಲೆಸ್ಲಿ ಲೆವಿಸ್ ಅವರೊಂದಿಗೆ ತಯಾರಿಸಿ ಫ್ಯೂಶನ್ ಸಂಗೀತದ ಸಾಧಕರಾಗಿಯೂ ಹೊರಹೊಮ್ಮಿದ್ದಾರೆ ಎಂದರು.

ಹರಿಹರನ್ ಅವರ ಸಂಗೀತ ಪ್ರತಿಭೆಗೆ 2004ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸಂದಿದೆ. ಅನು ಮಲಿಕ್ ಸಂಯೋಜನೆಯ ಬಾರ್ಡರ್ ಸಿನಿಮಾದ ಮೇರೆ ‘ದುಶ್ಮನ್ ಮೇರೆ ಭಾಯಿ..’ ಹಾಗೂ ಅಜಯ್ ಅತುಲ್ ಸಂಯೋಜನೆಯ ಮರಾಠಿ ಚಿತ್ರ ಜೋಗ್ವಾದ ‘ಜೀವ್ ರಾಂಗ್ಳ’ ಹಾಡುಗಳಿಗೆ ಎರಡು ಬಾರಿ ರಾಷ್ಟ್ರೀಯ ಪುರಸ್ಕಾರ ಸಹಿತ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಆಳ್ವಾಸ್ ಪಿಆರ್‌ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿದ್ದರು.