ತುಂಗಭದ್ರೆ ತಟದಲ್ಲಿ ಸಂಕ್ರಾಂತಿ ಸಂಭ್ರಮ

ಹರಿಹರ: ನಗರದ ಹೊರವಲಯದ ತುಂಗಭದ್ರ ನದಿ ದಡದಲ್ಲಿ ಮಂಗಳವಾರ ಸಾವಿರಾರು ಜನರು, ನದಿಸ್ನಾನ ಮಾಡಿ, ಗಂಗಾ ಪೂಜೆ ನೆರವೇರಿಸಿ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂಕ್ರಾಂತಿ ಆಚರಿಸಿ, ಮನೆಯಿಂದ ತಂದಿದ್ದ ತರಾವರಿ ಅಡುಗೆಯನ್ನು ಸಾಮೂಹಿಕವಾಗಿ ಸವಿದು ಸಂಭ್ರನಿಸಿದರು.

ತಾಲೂಕಿನ ನದಿಪಾತ್ರದ ಗ್ರಾಮಗಳಾದ ಗುತ್ತೂರು, ಹರ್ಲಾಪುರ, ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ಚಿಕ್ಕಬಿದರಿ, ಸಾರಥಿ, ನಂದಿಗುಡಿ, ಉಕ್ಕಡಗಾತ್ರಿ ಸೇರಿ ವಿವಿಧ ಗ್ರಾಮಗಳ ಜನರು ನದಿ ತಟದಲ್ಲಿ ಹಬ್ಬ ಆಚರಿಸಿದರು.

ನೀರಿನ ಹರಿವು ಸಾಧಾರಣವಾಗಿತ್ತು. ಅಯ್ಯಪ್ಪಸ್ವಾಮಿ ದೇವಸ್ಥಾನ ಮುಂಭಾಗ ಮಕ್ಕಳು, ಮಹಿಳೆಯರು ಸೇರಿ ಅಪಾರ ಜನರು ಪವಿತ್ರ ಸ್ನಾನ ಮಾಡಿದರು. ಮಹಿಳೆಯರು ಗಂಗಾಪೂಜೆ ನಿಯಮ ಪೊರೈಸಿದರು.

ಎತ್ತಿನ ಬಂಡಿ, ಟ್ರ್ಯಾಕ್ಟರ್, ಕಾರು, ಆಟೋ, ದ್ವಿ ಚಕ್ರವಾಹನಗಳಲ್ಲಿ ಬರುತ್ತಿದ್ದ ಜನರು ಬಿಸಿಲಿನ ತಾಪ ಹೆಚ್ಚಿಲ್ಲದಿದ್ದರೂ ಚಳಿ ಗಾಳಿ ನಿಮಿತ್ತ ಜನರು ಅಲ್ಲಲ್ಲಿ ಚಿಕ್ಕ ಟೆಂಟ್ ಹಾಕಿಕೊಂಡು ದಡದಲ್ಲಿ ಗುಂಪಾಗಿ ಕುಳಿತು ಗ್ರಾಮೀಣ ಸೊಗಡಿನ ರೊಟ್ಟಿ, ಚಟ್ನಿ, ಪಲ್ಯಗಳ ಊಟ ಸವಿದರು. ಹರಿಹರ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ ಇತರೆಡೆ ಜನರು ಆಗಮಿಸಿದ್ದರು.

ನಗರಸಭೆ ನಿರ್ಲಕ್ಷ್ಯ: ಕಳೆದೆರಡು ವರ್ಷ ನಗರಸಭೆ ನೀರಿನ ಟ್ಯಾಂಕರ್‌ಗಳ ಮೂಲಕ ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ಅಂಥ ವ್ಯವಸ್ಥೆ ಮಾಡಿರಲಿಲ್ಲ. ನದಿ ದಡದಲ್ಲಿ ಮದ್ಯದ ಒಡೆದ ಬಾಟಲಿಗಳ ಚೂರು ಬಿದ್ದಿದ್ದವು. ದಡದಲ್ಲಿ ಓಡಾಡುವ ಹಲವರಿಗೆ ಗಾಜು ಚುಚ್ಚಿಸಿಕೊಂಡು ಗಾಯಗೊಂಡರು. ತಟದಲ್ಲಿ ಸ್ಚಚ್ಛತೆ ಇರಲಿಲ್ಲ. ಎಲ್ಲೆಂದರಲ್ಲಿ ಬಿದ್ದ ಹಳೆ ಬಟ್ಟೆ-ಬರೆ, ಕಸ-ಕಡ್ಡಿಗಳು ಊಟ ಮಾಡುವ ಮೂಡ್‌ನಲ್ಲಿದ್ದ ಬಂದಿದ್ದವರಿಗೆ ಮುಜುಗರ ತರಿಸಿದವು.

Leave a Reply

Your email address will not be published. Required fields are marked *