Harihara, Harihareshwara, Rathotsava, Davangere,

ಭಕ್ತಸಾಗರಲ್ಲಿ ತೇಲಿದ ಹರಿಹರೇಶ್ವರನ ಬ್ರಹ್ಮರಥ

ಹರಿಹರ: ಮಾಘ ಶುಕ್ಲ ಪೌರ್ಣಿಮೆ ಮಂಗಳವಾರದ ಮೇಷ ಲಗ್ನದ ಶುಭಾಂಶದಲ್ಲಿ ಶೈವ-ವೈಷ್ಣವ ಸಮನ್ವಯ ಸಂಕೇತ ಕ್ಷೇತ್ರನಾಥ ಹರಿಹರೇಶ್ವರನ ಬ್ರಹ್ಮರಥ ಸಹಸ್ರಾರು ಭಕ್ತರ ಭಕ್ತ ಸಾಗರದಲ್ಲಿ ತೇಲಿತು.

ಗೋವಿಂದಾ.. ಗೋವಿಂದಾ… ಹರ-ಹರ ಮಹದೇವ.. ಎಂಬ ಭಕ್ತರ ಜಯಘೋಷಗಳು ರಥೋತ್ಸವದ ಚಾಲನಾ ಶಕ್ತಿಯಾಯಿತು. ತೇರುಗಡ್ಡೆಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ ರಾಜ ಬೀದಿಯಲ್ಲಿ ರಥೋತ್ಸವ ಸುಲಲಿತವಾಗಿ ಚಲಿಸಿತು. ಭಕ್ತರು, ರಥದ ಕಳಸದೆತ್ತರಕ್ಕೆ ಉತ್ತತ್ತಿ, ಬಾಳೆಹಣ್ಣು ತೂರಿದರು.

ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಗಣಪತಿ ಪೂಜೆ, ರುದ್ರಾಭಿಷೇಕ ಅಲಂಕಾರ, ನವಗ್ರಹ, ಜಪ-ತಪ-ಹೋಮ ಹವನ ಜರುಗಿದವು. ದೇವಸ್ಥಾನದ ರಸ್ತೆ ಸ್ವಚ್ಛಗೊಂಡು, ತಳಿರು ತೋರಣಗಳಿಂದ ಅಲಂಕೃತಗೊಂಡಿತ್ತು. ರಥಬೀದಿಯಲ್ಲಿ ರಂಗೋಲಿ ಬಿಡಿಸಲಾಗಿತ್ತು. ಬೆಳಗ್ಗೆ 11.35ರ ಮೇಷ ಲಗ್ನದಲ್ಲಿ ಹರಿಹರೇಶ್ವರನ ಉತ್ಸವಮೂರ್ತಿಯ ಬ್ರಹ್ಮರಥಾರೋಹಣ, ರಥೋತ್ಸವ ನಡೆಯಿತು.

ವಿವಿಧ ಸಂಘ-ಸಂಸ್ಥೆಗಳು ಪಾನಕ, ಮಜ್ಜಿಗೆ ವಿತರಿಸಿದವು. ದೇವಸ್ಥಾನ ಸಮಿತಿಯಿಂದ ಪ್ರಸಾದ ವಿತರಣೆ ನಡೆಯಿತು. ಜನಪ್ರತಿನಿಧಿಗಳು, ಗಣ್ಯರು, ಹಿರಿಯರು ಸೇರಿ ಸುತ್ತಮುತ್ತ ತಾಲೂಕಿನ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *