ಹರಿಹರದಲ್ಲಿ 50 ವರ್ಷಗಳ ನಂತರ ದನಗಳ ಜಾತ್ರೆ

ಹರಿಹರ: ರಥೋತ್ಸವದ ಅಂಗವಾಗಿ ಹರಿಹರೇಶ್ವರ ದೇವಸ್ಥಾನದ ಹಿಂಭಾಗದ ನದಿ ತೀರದಲ್ಲಿ ಮಂಗಳವಾರ ದನಗಳ ಜಾತ್ರೆ ಆರಂಭಗೊಂಡಿತು.

ಐದಾರು ದಶಕದ ಹಿಂದೆ ನದಿ ಪಾತ್ರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯುತ್ತಿತ್ತು. ಹಲವು ಕಾರಣಗಳಿಂದ ಸ್ಥಗಿತವಾಗಿದ್ದ ಈ ಜಾತ್ರೆಗೆ ಮಾಜೇನಹಳ್ಳಿ, ಕಸಬಾ ರೈತರು ಪುನರ್ ಚಾಲನೆ ನೀಡಿದ್ದಾರೆ.

ರಾಜ್ಯದ ಅಮೃತ ಮಹಲ್, ಹಳ್ಳಿಕಾರ, ಗುಜರಾತ್ ಮೂಲದ ಗೀರ್, ಮಹಾರಾಷ್ಟ್ರದ ಕಿಲ್ಲಾರ, ಆಂಧ್ರದ ಉಂಗಲ್ ಸೇರಿ ವಿವಿಧ ತಳಿಯ ರಾಸುಗಳು ಪ್ರದರ್ಶನ ಹಾಗೂ ಮಾರಾಟ ಫೆ. 23ರವರೆಗೆ ನಡೆಯಲಿದೆ. ಉತ್ತಮ ತಳಿ ರಾಸುಗಳಿಗೆ ನಗದು ಬಹುಮಾನ ವಿತರಿಸಲಾಗುವುದು.

ರಾಸುಗಳಿಗೆ ಮೇವು, ಕುಡಿವ ನೀರಿನ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ ಕಲ್ಪಿಸಿದ್ದೇವೆ. ರಾಸುಗಳ ಮಾಲೀಕರಿಗೆ, ವ್ಯಾಪಾರಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ಉತ್ತರ ಕರ್ನಾಟಕದಿಂದ ಹೆಚ್ಚು ಸ್ಪಂದನೆ ದೊರೆವ ನಿರೀಕ್ಷೆ ಇದೆ ಎಂದು ಸಂಘಟಕರಾದ ಮಹದೇವಪ್ಪ ಗೌಡ, ಎಂ. ಚಂದ್ರಶೇಖರ್, ಪೈಲ್ವಾನ್ ಸುರೇಶ್ ತಿಳಿಸಿದರು.

₹1.05 ಲಕ್ಷಕ್ಕೆ ಮಾರಾಟಗೊಂಡ ಹಳ್ಳಿಕಾರ ತಳಿ ಜೋಡೆತ್ತು
ಹಳ್ಳಿಕಾರ ತಳಿ ಜೋಡೆತ್ತುಗಳು 1.05 ಲಕ್ಷ ರೂ.ಗೆ ಮಾರಾಟವಾದವು. ಅವುಗಳನ್ನು ಖರೀದಿಸಿದ ಪೂಜಾರ್ ರಾಜಣ್ಣ ಮಾತನಾಡಿ, ಎತ್ತುಗಳು ಕೃಷಿಕರ ಮನೆಗೆ ಭೂಷಣ. ಬೇಸಾಯ ಮಾಡಲು ಟ್ರಾೃಕ್ಟರ್ ಸೇರಿ ಹಲವು ಯಂತ್ರಗಳಿವೆ. ಬಿತ್ತನೆ ಸಂದರ್ಭದಲ್ಲಿ ಮಾತ್ರ ಎತ್ತುಗಳನ್ನು ಬಳಸುತ್ತೇವೆ ಎಂದರು.