ಶಿವಣ್ಣ, ನನ್ನ ಮಧ್ಯೆ ಭಿನ್ನಮತವಿಲ್ಲ

ಹರಿಹರ: ಶಿವಣ್ಣ ದಡ್ಡರಲ್ಲ. ಸಿನಿಮಾ ರಂಗದಲ್ಲಿ 36 ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಅಭಿಮಾನಿಗಳು ನಡೆಸುತ್ತಿರುವ ಪ್ರತಿಭಟನೆ ಅವರ ಕಥೆ ಹಾಗೂ ಪಾತ್ರದ ಆಯ್ಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ನಟ ಸುದೀಪ್ ಅಭಿಪ್ರಾಯಪಟ್ಟರು.

ತಾಲೂಕಿನ ರಾಜನಹಳ್ಳಿ ಗ್ರಾಮದ ವಾಲ್ಮೀಕಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದು ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಥೆ ಹಾಗೂ ಪಾತ್ರಗಳ ಬಗ್ಗೆ ನಾನು ಶಿವಣ್ಣ ನಿರ್ದೇಶಕ ಪ್ರೇಮ್ ಅವರೊದಿಗೆ ಪರಸ್ಪರ ಚರ್ಚಿಸಿ, ಒಪ್ಪಿ ಚಿತ್ರದಲ್ಲಿ ನಟಿಸಿದ್ದೇವೆ. ಶಿವಣ್ಣ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾ ರೀತಿಯಲ್ಲಿಯೇ ನೋಡಿ ಆನಂದಿಸಬೇಕು. ವಿನಾ ಕಾರಣ ವಿವಾದಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ಸಿನಿಮಾದಲ್ಲಿ ಶಿವಣ್ಣ ತಾಯಿ ಪಾತ್ರಕ್ಕೆ ನೀಡಿದ ಮಾತಿನಂತೆ ಸನ್ನಿವೇಶದಲ್ಲಿ ನನ್ನ ಮೇಲೆ ಕೈ ಎತ್ತುವುದಿಲ್ಲ. ಶಿವಣ್ಣ ಪಾತ್ರದಲ್ಲಿ ನಾನಿದ್ದರೇ, ನಾನೂ ಹೊಡೆಸಿಕೊಳ್ಳುತ್ತಿದ್ದೆ. ಅಭಿಮಾನಿಗಳಿಗೆ ಈ ಸನ್ನಿವೇಶ ಬೇಸರವಾಗಿದ್ದರೇ, ಪ್ರೇಮ್ ಅವರಿಗೆ ಹೇಳಿ ಸೀನ್ ತೆಗೆಸಲಿ ಎಂದರು.

ಮದಕರಿ ನಾಯಕನ ಸಿನಿಮಾ ಮಾಡುತ್ತೇನೆ:
ಮದಕರಿ ನಾಯಕ ಚಿತ್ರಕ್ಕಾಗಿ ಅವರ ಇತಿಹಾಸವನ್ನು ಕಳೆದ 3 ವರ್ಷಗಳಿಂದ ಅಧ್ಯಯನ ಮಾಡಿದ್ದೇನೆ. ಹಾಗೇ ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಬರುವ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಪ್ರಾರಂಭಿಸಲಿದ್ದೇನೆ ಎಂದು ಸುದೀಪ್ ಖಚಿತ ಪಡಿಸಿದರು.

ದುರ್ಗದ ಹುಲಿ ಚಲನಚಿತ್ರದ ಟೈಟಲ್ ಪ್ರಸ್ತುತ ವಿವಾದದಲ್ಲಿದೆ. ಟೈಟಲ್ ನನಗೆ ನೀಡಿದರೆ ಅದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇಲ್ಲದಿದ್ದರೆ ಮದಕರಿ ನಾಯಕನ ಚಿತ್ರದಲ್ಲಿ ನಟಿಸುವೆ. ದರ್ಶನ್ ಅಭಿನಯದ ಚಿತ್ರ ಸೆಟ್ಟೇರಲಿದೆ. ಅವರ ಚಿತ್ರಕ್ಕೂ ಉತ್ತಮ ಜನಾಭಿಪ್ರಾಯ ಮೂಡಲಿ ಎಂದ ಅವರು, ಮದಕರಿ ನಾಯಕನ ಸಿನಿಮಾ ಇಬ್ಬರು ನಾಯಕ ನಟರ ಅಭಿನಯ ಶೈಲಿ ಜನತೆ ಮುಂದೆ ಬರಲಿದೆ ಎಂದು ಸೂಚ್ಯವಾಗಿ ತಿಳಿಸಿ ವಿವಾದಕ್ಕೆ ತೆರೆ ಎಳೆದರು.
ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಕಲೆ ಹಾಗೂ ಕಲಾವಿದರಿಗೆ ಜಾತಿ ಕಿಚ್ಚು ಹಚ್ಚುವ ಉದ್ದೇಶ ಇಲ್ಲ. ಯಾರೇ ಪಾತ್ರವನ್ನು ನಿರ್ವಹಿಸಿದರೂ ಅಲ್ಲಿ ನೈಜತೆಗೆ ಒತ್ತು ನೀಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದರು.

ನಟ ಸುದೀಪ್ ಈಗಾಗಲೇ ಪಾತ್ರದ ಬಗ್ಗೆ ಪೂರ್ವ ತಯಾರಿ ನಡೆಸಿದ್ದು, ನಾಯಕ ಸಮಾಜದ ಅವರು ಪಾತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂಬ ಅಭಿಪ್ರಾಯ ನಮ್ಮದು ಎಂದು ಸುದೀಪ್ ಪರ ವಕಾಲತ್ತು ವಹಿಸಿದರು. ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಇತರರಿದ್ದರು.