More

    ಫ್ಲೆಕ್ಸ್ ಹಾವಳಿ ತಡೆಗೆ ನಿಯಮ; ಹರಿಹರ ನಗರಸಭೆ ಸಿದ್ಧತೆ

    ಹರಿಹರ: ನಗರಸಭೆ ಅನುಮತಿ ಇಲ್ಲದೇ ಫ್ಲೆಕ್ಸ್ ಅಳವಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ನಿಯಮ ರೂಪಿಸಲಾಗುವುದು ಎಂದು ಪೌರಾಯುಕ್ತ ಐ.ಬಸವರಾಜ್ ತಿಳಿಸಿದರು.

    ನಗರದಲ್ಲಿ ಅವ್ಯಾಹತವಾಗಿ ಫ್ಲೆಕ್ಸ್ ಅಳವಡಿಕೆ ತಡೆಗಟ್ಟುವ ಬಗ್ಗೆ ನಗರಸಭೆಯಲ್ಲಿ ಕರೆದಿದ್ದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಭೆಯಲ್ಲಿ ಪೌರಾಯುಕ್ತರು ಮಾತನಾಡಿದರು.

    ನಗರದಲ್ಲಿ ವಿಪರೀತವಾಗಿ ಫ್ಲೆಕ್ಸ್ ಅಳವಡಿಸುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ ಎಂದು ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ವಿವಿಧ ಸಲಹೆ ಸೂಚನೆ ಪರಿಗಣಿಸಿ ಮುಂದಿನ ದಿನಗಳಲ್ಲಿ ನಿಯಮ ಜಾರಿ ತರಲಾಗುತ್ತದೆ ಎಂದು ಹೇಳಿದರು.

    ಸಾರ್ವಜನಿಕರ ಹಿತಾಸಕ್ತಿ ಹಾಗೂ ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಫ್ಲೆಕ್ಸ್ ಅಳವಡಿಕೆಗೆ ಕಡಿವಾಣ ಹಾಕಲೇಬೇಕಿದೆ. ಫ್ಲೆಕ್ಸ್ ಹಾಕುವವರು ನಗರಸಭೆ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಸಾರ್ವಜನಿಕರಿಗೊಂದು, ಪ್ರಭಾವಿಗಳಿಗೊಂದು ನಿಮಯ ಮಾಡಬಾರದು ಎಂಬಿತ್ಯಾದಿ ಸಲಹೆ ಸಭೆಯಲ್ಲಿ ವ್ಯಕ್ತವಾದವು.

    ನಗರಸಭೆ ಉಪಾಧ್ಯಕ್ಷ ಎ.ವಾಮನಮೂರ್ತಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳ ವ್ಯವಸ್ಥೆ ಇರುವುದರಿಂದ ಯಾವುದೇ ನಿಯಮ ಮಾಡಿದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದು ಹೇಳಿದರು.

    ಸರ್ಕಾರದ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿದರೆ ನಾವು ಜೀವನ ಮಾಡುವುದು ಕಷ್ಟಕರವಾಗುತ್ತದೆ. ಆದ್ದರಿಂದ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಕೆಲ ಸಡಿಲಿಕೆ ಮಾಡಬೇಕಾಗುತ್ತದೆ. ಆದರೆ ಅದನ್ನೇ ನಮ್ಮ ದೌರ್ಬಲ್ಯವೆಂದು ಭಾವಿಸುವುದು ಸರಿಯಲ್ಲ ಎಂದರು.

    ನಗರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಫ್ಲೆಕ್ಸ್ ಅಳವಡಿಕೆಯಿಂದ ಜನತೆ ಬೇಸತ್ತಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು ಸಹ ಹೊಣೆಗಾರರು. ಮುಂದಿನ ದಿನಗಳಲ್ಲಿ ನಗರದಲ್ಲಿ ಅಳವಡಿಸುವ ಪ್ರತಿ ಫ್ಲೆಕ್ಸ್‌ಗಳಿಗೆ ಶುಲ್ಕ ನಿಗದಿ ಮಾಡಿ. ಇದರಿಂದ ನಗರಸಭೆಗೆ ಆದಾಯ ಬರುತ್ತದೆ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಶಾಹಿನಾ ಭಾನು ಮಾತನಾಡಿ, ಸರ್ಕಾರದ ನಿಯಮದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts