ಸೌತೆ ಬೆಳೆ ಕೈ ಹಿಡಿದ್ರೂ, ಬೆಲೆ ಕೈ ಹಿಡಿಯಲಿಲ್ಲ

ದಾವಣಗೆರೆ: ಸಾಂಬಾರು ಸೌತೆ ಬೆಲೆ ಮಾರುಕಟ್ಟೆಯಲ್ಲಿ ದಿಢೀರ್ ಕುಸಿದಿದ್ದು, ಲಕ್ಕೆ ಬಂದ ಸೌತೆ ಬಳ್ಳಿಯನ್ನು ರೈತರೇ ನಾಶ ಮಾಡುತ್ತಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮ ಭದ್ರಾ ನಾಲೆಯ ಕೊನೆ ಭಾಗವಾಗಿದೆ. ಭದ್ರಾ ಅಣೆಕಟ್ಟಿನಿಂದ ನೀರು ಹರಿದಾಗ ಭತ್ತದ ನಾಟಿಯಾಗುತ್ತಿದೆ.

ಬೇಸಿಗೆ ಹಂಗಾಮಿಗೆ ಭತ್ತಕ್ಕೆ ನೀರಿಲ್ಲದ ಕಾರಣ ರೈತರು ಸಾಂಬಾರು ಸೌತೆ ಬೀಜ ಬಿತ್ತನೆ ಮಾಡಿದ್ದರು. ಜಮೀನು ತುಂಬ ಹಸಿರಾಗಿ ಹರಡಿದ್ದ ಸೌತೆ, ಉತ್ತಮ ಇಳುವರಿ ನೀಡಿತು. ಮಾರುಕಟ್ಟೆಯಲ್ಲಿ ಕೆಜಿಗೆ 30-40 ರೂ.ಗೆ ಮಾರಾಟವಾಗಿತ್ತು.

ಈಗ ಸೌತೆ ಬೆಲೆ ಕುಸಿದಿದ್ದು, ಕೆಜಿಗೆ 2 ರೂ. ತಲುಪಿದೆ. ಅದನ್ನು ಬಿಡಿಸಿ ಮಾರುಕಟ್ಟೆಗೆ ಸಾಗಿಸಿದರೆ, ಸಾಗಣೆ ವೆಚ್ಚವೂ ದೊರೆಯುವುದಿಲ್ಲ. ಇದರಿಂದ ದಿಕ್ಕು ತೋಚದ ರೈತರು, ಸೌತೆ ಬಳ್ಳಿಯನ್ನು ನಾಶಪಡಿಸುತ್ತಿದ್ದಾರೆ.

ಭತ್ತದ ಬದಲು ತರಕಾರಿ ಬೆಳೆದಾದರೂ ಬದುಕುತ್ತೇವೆಂಬ ಭರವಸೆ ಹುಸಿಯಾಗಿದೆ. ಉತ್ತಮ ಇಳುವರಿ ಬಂದರೂ, ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಬಿತ್ತನೆಗೆ ಹಾಕಿದ ಬಂಡವಾಳ ವ್ಯರ್ಥವಾಗಿ, ಸಾಲದ ಹೊರೆ ಹೆಚ್ಚಾಗಿದೆ. ಸಂಕಷ್ಟದಲ್ಲಿರುವ ರೈತರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

 

Leave a Reply

Your email address will not be published. Required fields are marked *