ಹಲ್ಲೆ ಆರೋಪಿಗಳಿಗೆ 6 ತಿಂಗಳು ಜೈಲು

ಹರಿಹರ: ತಮ್ಮ ಪುತ್ರನಿಗೆ ಹುಡುಗಿಕೊಟ್ಟು ಮದುವೆ ಮಾಡಲಿಲ್ಲವೆಂಬ ಕಾರಣಕ್ಕೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ, 4,500 ರೂ. ದಂಡ ವಿಧಿಸಿದೆ.

ತಾಲೂಕಿನ ಗುತ್ತೂರು ಗ್ರಾಮದ ಭೀಮಪ್ಪ ಎಂಬುವರ ಮಗಳು ಸುಮಾ ಅವರ ವಿವಾಹ ಹರಪನಹಳ್ಳಿಯ ನಾಗರಾಜ್ ಜತೆ ನಡೆದಿತ್ತು. ಅದೇ ಗ್ರಾಮದ ಕೆಂಚಪ್ಪ ತನ್ನ ಮಗನಿಗೆ ಯುವತಿ ಕೊಟ್ಟು ಮದುವೆ ಮಾಡಲಿಲ್ಲವೆಂದು 2015ರ ಮಾ.3 ರಂದು ಭೀಮಪ್ಪ ಸೇರಿ ಮೂವರ ಮೇಲೆ ಹಲ್ಲೆ ನಡೆಸಿದ್ದರು.

ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಮಲತಾ ಬೆಣ್ಣೆಕಲ್ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸಹಾಯಕ ಅಭಿಯೋಜಕ ಶಂಷೀರ್ ಅಲಿಖಾನ್ ಸರ್ಕಾರದ ಪರ ವಾದ ಮಂಡಿಸಿದ್ದರು.