ಕಲೆ, ವಿಜ್ಞಾನ ಮಕ್ಕಳ ಭವಿಷ್ಯಕ್ಕೆ ಸಹಕಾರಿ

ಹರಿಹರ: ಕಲೆ, ವಿಜ್ಞಾನ ಮಕ್ಕಳ ಭವಿಷ್ಯ ರೂಪಿಸಲು ಸಹಕಾರಿ ಎಂದು ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬೆಳ್ಳೂಡಿ ಗ್ರಾಮದ ಕನಕ ಗುರುಪೀಠದ ಶಾಖಾ ಮಠದಲ್ಲಿರುವ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲೆ, ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಿರಂತರ ಬದಲಾಗುತ್ತಿರುವ ಕಾಲದಲ್ಲಿ ಹೊಸ ವಿಷಯ, ಪರಿಕರಗಳ ಅವಶ್ಯಕತೆ ಇದೆ. ಅವುಗಳನ್ನು ಕಂಡು ಹಿಡಿಯಲು ಹಾಗೂ ಸಿದ್ಧಪಡಿಸಲು ವಿಜ್ಞಾನದ ಕಲಿಕೆಗೆ ಆದ್ಯತೆ ನೀಡಬೇಕು. ವಿಜ್ಞಾನಕ್ಕೆ ಪೂರಕವಾಗಿ ಕಲೆ ಸಹಾಯಕವಾಗಿದೆ ಎಂದು ತಿಳಿಸಿದರು.

ಜಗತ್ತು ನಾಗಾಲೋಟದಿಂದ ಓಡುತ್ತಿದೆ. ಅದಕ್ಕೆ ತಕ್ಕಂತೆ ನಾವು ಓಡಬೇಕಾಗಿದೆ. ಮಕ್ಕಳಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಸಾಮಾಜಿಕ ಕಳಕಳಿ ತುಂಬುವುದರಿಂದ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಹೇಳಿದರು.

ಶಾಲೆಯ ಕಾರ್ಯದರ್ಶಿ ನಿಂಗಪ್ಪ ಮಾತನಾಡಿ, ಮಕ್ಕಳಲ್ಲಿ ಹೊಸ ಆಲೋಚನೆ, ನೂತನ ತಂತ್ರಜ್ಞಾನಗಳ ಅರಿವು, ಮಾಹಿತಿ ನೀಡಿ, ಉತ್ತಮ ಸಂದೇಶವನ್ನು ಅರ್ಥೈಸುವುದೇ ಇದರ ಮೂಲಉದ್ದೇಶ ಎಂದು ತಿಳಿಸಿದರು. ಶಾಲೆಯ ಮುಖ್ಯಶಿಕ್ಷಕಿ ಶೃತಿ ಇನಾಂದರ್ ಇತರರಿದ್ದರು.