More

    ದಾಸರ ಆರಾಧನೆ| ಹರಿದಾಸ ಶ್ರೇಷ್ಠ ಗೋಪಾಲದಾಸರು

    ಕನ್ನಡನಾಡಿನ ಹರಿದಾಸರಲ್ಲಿ ಅಗ್ರಗಣ್ಯರಲ್ಲೊಬ್ಬರು ಗೋಪಾಲದಾಸರು. ಪುರಂದರ ದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರನ್ನು ಒಟ್ಟಿಗೆ ದಾಸ ಚತುಷ್ಟಯರು ಎಂದು ನಿರ್ದೇಶಿಸುವ ಸಂಪ್ರದಾಯವಿದೆ.

    ಗೋಪಾಲದಾಸರು ಹುಟ್ಟಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರುಕಲ್ಲು ಗ್ರಾಮದಲ್ಲಿ. ಅವರ ಮೊದಲ ಹೆಸರು ಭಾಗಣ್ಣ. ಹುಟ್ಟಿದ ಕೆಲವು ವರ್ಷಗಳಲ್ಲಿ ತಂದೆ ಮುರಾರಿರಾಯರು ಕಾಲವಾದರು. ಆಗ ದಿಕ್ಕಿಲ್ಲದ ತಾಯಿ ವೆಂಕಮ್ಮ ನಾಲ್ವರು ಗಂಡುಮಕ್ಕಳೊಂದಿಗೆ ಸಂಕಾಪುರಕ್ಕೆ ಬಂದು ಊರ ಹೊರಗಿದ್ದ ಮಾರುತಿ ದೇವಾಲಯದಲ್ಲಿ ಆಶ್ರಯ ಪಡೆದರು. ಮಕ್ಕಳನ್ನು ಸಾಕುವುದು ಅವರಿಗೆ ತುಂಬ ಕಷ್ಟವಾಗಿತ್ತು.

    ವಯಸ್ಸಿಗೆ ಬಂದು ವಿದ್ಯಾವಂತರಾದ ಗೋಪಾಲದಾಸರು ತಾಯಿಯ ಬವಣೆಯನ್ನು ತಪ್ಪಿಸುವ ಉದ್ದೇಶದಿಂದ ಸಂಪಾದಿಸುವ ಮನಸ್ಸು ಮಾಡಿದರು. ಗಾಯತ್ರೀಮಂತ್ರದ ಧ್ಯಾನದಿಂದ ಅಪೂರ್ವ ಸಿದ್ಧಿಯನ್ನು ಪಡೆದು ಭವಿಷ್ಯ ಹೇಳುವುದರಲ್ಲಿ ನಿಷ್ಣಾತರಾದರು. ದಿನದಿನಕ್ಕೆ ಜನಾನುರಾಗ ಹೆಚ್ಚಿತು. ಅಲ್ಲದೆ ಕವಿತೆ ರಚಿಸುವ ಸಾಮರ್ಥ್ಯವೂ ದೈವದತ್ತವಾಗಿ ಲಭಿಸಿತ್ತು. ಮಗನ ಏಳಿಗೆಯಿಂದ ವೆಂಕಮ್ಮನವರ ಕಷ್ಟಗಳು ಕಡಿಮೆಯಾಯಿತು. ಅವರು ಮಕ್ಕಳೊಂದಿಗೆ ಉತ್ತನೂರಿಗೆ ಬಂದು ನೆಲೆಸಿದರು. ಅಲ್ಲಿನ ವೆಂಕಟೇಶ ದೇವಸ್ಥಾನವೇ ಗೋಪಾಲದಾಸರ ಕಾರ್ಯಕ್ಷೇತ್ರವಾಯಿತು.

    ಹರಿದಾಸರಲ್ಲಿ ಪ್ರಸಿದ್ಧರಾಗಿದ್ದ ವಿಜಯದಾಸರ ಸಂದರ್ಶನ ಗೋಪಾಲದಾಸರಿಗೆ ಲಭ್ಯವಾದದ್ದು ಅಲ್ಲಿಯೇ. ಅವರಿಂದ ಗೋಪಾಲವಿಠಲ ಎಂಬ ಅಂಕಿತವನ್ನು ಪಡೆದು, ಹರಿದಾಸ ದೀಕ್ಷೆಯನ್ನು ಕೈಕೊಂಡರು ಗೋಪಾಲದಾಸರು. ಅಣ್ಣ ದೀಕ್ಷೆ ಪಡೆದುದನ್ನು ಕಂಡು ತಮ್ಮಂದಿರಾದ ದಾಸಪ್ಪ, ಸೀನಪ್ಪ, ರಂಗಪ್ಪ ಕೂಡ ಆ ಕೈಂಕರ್ಯದಲ್ಲಿಯೇ ತೊಡಗಿ ಕೀರ್ತನೆಗಳನ್ನು ರಚಿಸಿ ಕೃತಾರ್ಥರಾದರು. ಗೋಪಾಲದಾಸರು ಮಾನ್ವಿಯ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸ) ತಮ್ಮ ಆಯುಸ್ಸಿನ ಸ್ವಲ್ಪ ಅವಧಿಯನ್ನು ದಾನ ಮಾಡಿ, ಅವರು ಹರಿದಾಸ ದೀಕ್ಷೆಯಲ್ಲಿ ನಿರತರಾಗುವಂತೆ ಮಾಡಿದ ಸಂಗತಿಯಂತೂ ಆಶ್ಚರ್ಯಕರವಾದುದು. ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು. ಗೋಪಾಲದಾಸರು ಕೀರ್ತನಕಾರರಷ್ಟೇ ಅಲ್ಲದೆ ಕುಶಲಿಯಾದ ಚಿತ್ರಕಾರರೂ ಆಗಿದ್ದರು. ಅವರಿಂದ ರಚಿತವಾದ ಎಷ್ಟೋ ಚಿತ್ರಪಟಗಳನ್ನು ಪೂಜಿಸಿ ಭಕ್ತರು ತಮ್ಮ ಇಷ್ಟಾರ್ಥವನ್ನು ಪಡೆದರೆಂದು ತಿಳಿದುಬರುತ್ತದೆ. ‘ರಥವಾನೇರಿದ ರಾಘವೇಂದ್ರ, ವೈರಾಗ್ಯಮಾರ್ಗ ಕೇಳು, ಆವ ರೋಗವೋ ಎನಗೆ ಧನ್ವಂತ್ರಿ, ಬಾರಯ್ಯ ಬಾ ಬಾ ಭಕುತರ ಪ್ರಿಯ, ಎನ್ನ ಬಿನ್ನಪ ಕೇಳೋ ಧನ್ವಂತ್ರಿ ದಯಮಾಡೊ, ಹ್ಯಾಂಗೆ ಮಾಡಲಯ್ಯ ಹೋಗುತಿದೆ ಆಯುಷ್ಯ’ ಇವೆಲ್ಲ ಅವರ ಪ್ರಮುಖ ಕೀರ್ತನೆಗಳು. ಅವರು ರಚಿಸಿರುವ ಧನ್ವಂತ್ರಿಸ್ತುತಿ, ಪಂಢರಾಪುರದ ಪಾಂಡುರಂಗನ ದರ್ಶನ ಪಡೆದ ಸಂದರ್ಭವನ್ನು ಕುರಿತ ಒಂದು ಸುಳಾದಿ, ಕರ್ತೃವಿನ ಅಂತರಂಗದ ಅಭೀಷ್ಟ ಮತ್ತು ಆಧ್ಯಾತ್ಮಿಕ ಪ್ರಗತಿಗಳನ್ನು ಚಿತ್ರಿಸುವ ಹಲವಾರು ರಚನೆಗಳು ಹರಿದಾಸ ಸಾಹಿತ್ಯದಲ್ಲಿ ತುಂಬ ಮನ್ನಣೆ ಗಳಿಸಿವೆ. ಅವರ ಕೃತಿಗಳು ಕೇವಲ ಸ್ತುತಿಪರಗಳಾಗಿರದೆ ತಾತ್ತಿ ್ವ ಪ್ರತಿಪಾದನೆಯ ರಚನೆಗಳೂ ಆಗಿವೆ. ಭಕ್ತಿಯ ಸಾಧನೆಯಿಂದ ಮಾನವಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ನಿಲುವು ಅವರ ಕೀರ್ತನೆಗಳಲ್ಲಿ ವ್ಯಕ್ತವಾಗಿದೆ. ಪುಷ್ಯ ಬಹುಳ ಅಷ್ಟಮಿಯಂದು ಹರಿಪಾದ ಸೇರಿದ ಗೋಪಾಲದಾಸರ ಬೃಂದಾವನ ಉತ್ತನೂರಿನಲ್ಲಿದೆ. ಅಲ್ಲಿ ಪ್ರತಿವರ್ಷದಂತೆ ಪುಷ್ಯ ಬಹುಳ ಅಷ್ಟಮಿಯಾದ ಈ ದಿನ (ಜ. 18) ದಾಸರ ಆರಾಧನೆ ಜರುಗಲಿದೆ.

    ಪರಿಮಳಾ ಆಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts