Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಹಠಮಾರಿ ಮಕ್ಕಳ ಹತೋಟಿ ಹೇಗೆ…?

Saturday, 15.09.2018, 2:05 AM       No Comments

ಮಕ್ಕಳಲ್ಲಿ ಹಠ ಕಡಿಮೆಯಾಗಬೇಕೆಂದರೆ ತಂದೆ-ತಾಯಿ ನಡುವೆ ಸಾಮರಸ್ಯ ಅಗತ್ಯ. ಒಬ್ಬರು ಬೈಯುತ್ತಿರುವಾಗ ಮತ್ತೊಬ್ಬರು ಮಾತಾಡಕೂಡದು. ಒಬ್ಬರು ‘ಇಲ್ಲ’ ಎಂದಾಗ ಇನ್ನೊಬ್ಬರು ‘ಕೊಡುತ್ತೇನೆ’ ಎನ್ನಬಾರದು. ‘ನೀನು ನಮ್ಮನ್ನು ಬೇರ್ಪಡಿಸಿ ಆಡಿಕೊಳ್ಳಲಾರೆ’ ಎಂಬ ವಿಷಯವನ್ನು ಮಗನಿ/ಳಿಗೆ ಸ್ಪಷ್ಟವಾಗಿ ಅರ್ಥವಾಗುವ ಹಾಗೆ ನಡೆದುಕೊಳ್ಳಬೇಕು.

ಮಕ್ಕಳನ್ನು ನಿಭಾಯಿಸುವುದು ಅಂದುಕೊಂಡಷ್ಟು ಸುಲಭವಲ್ಲ; ಹಾಗಂತ ಅದು ತೀರಾ ಕಷ್ಟವೂ ಅಲ್ಲ. ಬಯಸಿದ್ದನ್ನು ದಕ್ಕಿಸಿಕೊಳ್ಳಲೆಂದು ಮಕ್ಕಳು ಹೂಡುವ ಹೂಟ, ಹಠದ ತಂತ್ರಗಳನ್ನು ಅರಿತರೆ, ಹೆತ್ತವರು ಮುಜುಗರದಿಂದ ತಪ್ಪಿಸಿಕೊಳ್ಳಬಹುದು.

ಎಕ್ಸ್​ಟ್ರಾ ಸ್ಮಾರ್ಟ್: ಮಿತಿಮೀರಿದ ವಿಪರೀತದ ಮಾತುಗಳ ಮೂಲಕ (ನಾನು ಕೇಳಿದ್ದು ಕೊಡಿಸದಿದ್ದರೆ ಸಾಯುವೆ/ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿಯಿಲ್ಲ/ಮನೆಗೆ ಬರುವುದಿಲ್ಲ ಇತ್ಯಾದಿ) ಅಥವಾ ವಿಪರೀತ ಅರಾಜಕತೆಯ ನಡವಳಿಕೆ ಮೂಲಕ (ತಿಂಡಿಗಾಗಿ ಪುಸ್ತಕಗಳನ್ನು ಮಾರುವುದು/ಅವು ಕಳೆದು ಹೋದವೆನ್ನುವುದು ಇತ್ಯಾದಿ) ಆಸೆ ಪೂರೈಸಿಕೊಳ್ಳಲು ಯತ್ನಿಸುವ ಮಕ್ಕಳನ್ನು ‘ಎಕ್ಸ್​ಟ್ರಾ ಸ್ಮಾರ್ಟ್’ ಎನ್ನುತ್ತಾರೆ. ತಮ್ಮ ಬೇಡಿಕೆಗಳು ಸಮಂಜಸ ಎಂದೂ, ತಮ್ಮ ಅಭಿಪ್ರಾಯಗಳು ಸರಿ ಎಂದೂ ಗಾಢವಾಗಿ ನಂಬಿ… ಎಷ್ಟು ಜೋರಾಗಿ ವಸ್ತುಗಳನ್ನು ಎಸೆದರೆ ತಾಯಿ ತಮ್ಮ ದಾರಿಗೆ ಬರುತ್ತಾಳೆ, ಎಷ್ಟು ಕೋಪ ಪ್ರದರ್ಶಿಸಿದರೆ ತಂದೆ ಮಾತು ಕೇಳುತ್ತಾನೆ, ಹೇಗೆ ಬೆದರಿಸಬೇಕು, ಎಷ್ಟು ಹೊತ್ತು ಅತ್ತರೆ ತನಗೆ ಬೇಕಾಗಿದ್ದು ಸಿಗುತ್ತದೆ, ಸಿಗುವುದಿಲ್ಲ- ಎನ್ನುವುದು ಅರ್ಥವಾದಾಗ ಎಷ್ಟು ಹೊತ್ತಿನ ನಂತರ ಅಳು ನಿಲ್ಲಿಸಬೇಕು ಎನ್ನುವುದು ಮಕ್ಕಳಿಗೆ ತಿಳಿದ ಹಾಗೆ ದೊಡ್ಡವರಿಗೆ ತಿಳಿಯುವುದಿಲ್ಲ!

ಈ ಎಕ್ಸ್​ಟ್ರಾ ಸ್ಮಾರ್ಟ್ ಮಕ್ಕಳನ್ನು ಬೇರೆಯದೇ ರೀತಿಯಲ್ಲಿ ಡೀಲ್ ಮಾಡಬೇಕು. ಬೆದರಿಕೆಯ ಅಸ್ತ್ರದೊಂದಿಗೆ ಅವರು ಯುದ್ಧಘೊಷಿಸಿದಾಗ ಆ ಪದ್ಮವ್ಯೂಹ ಭೇದಿಸುವುದಕ್ಕೆ ಒಂದು ಅಸ್ತ್ರವಿದೆ. ಅದರ ಹೆಸರು ‘ಕಠಿಣ ನಿರ್ಧಾರ’.

ಮಗ ಬಯಸಿದ್ದನ್ನು ಕೊಡಲು ಇಷ್ಟವಿರದಿದ್ದರೆ ಅವನ ಯುದ್ಧ ಎಷ್ಟೇ ತೀವ್ರವಾಗಿದ್ದರೂ ಅಳುಕಬೇಡಿ. ನಿಮ್ಮ ಹತ್ತಿರ ಇಂತಹ ಬ್ಲಾ್ಯಕ್​ವೆುೕಲ್ ನಡೆಯುವುದಿಲ್ಲ ಎನ್ನುವುದನ್ನು ಅವನಿಗೆ ಸ್ಪಷ್ಟವಾಗಿ ತಿಳಿಯುವ ಹಾಗೆ ಮಾಡಿ. ‘ನಮ್ಮ ನಿರ್ಣಯ ತಿಳಿಸಿದ್ದೇವೆ. ಅದನ್ನು ನೀನು ಅಂಗೀಕರಿಸದಿದ್ದರೆ ನಾವೇನೂ ಮಾಡಲಾರೆವು. ಯಾವುದೇ ಬೆದರಿಕೆ, ಕಣ್ಣೀರು, ಸಿಟ್ಟಿಗೆ ನಾವು ಜಗ್ಗುವುದಿಲ್ಲ ಎನ್ನುವುದು ನಿನಗೂ ಗೊತ್ತು. ನೀನು ಬಹಳ ಸಿಟ್ಟಿನಲ್ಲಿರುವ ಹಾಗಿದೆ. ಅದು ಇಳಿದ ಮೇಲೆ ಮತ್ತೆ ಮಾತಾಡೋಣ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಅವರ ಬಯಕೆಯನ್ನು ಪೋಸ್ಟ್​ಪೋನ್ ಮಾಡುವುದು ಈ ಹಟಸ್ವಭಾವಕ್ಕೆ ಮದ್ದು.

‘ಹಠಮಾರಿತನ’ ಎಂಬ ರಾಕ್ಷಸಿಯನ್ನು ಕೊಲ್ಲುವ ಬ್ರಹ್ಮಾಸ್ತ್ರವೆಂದರೆ ಶಿಸ್ತು. ಅಂದರೆ ಹೊಡೆಯುವುದು, ಬೈಯುವುದು ಅಲ್ಲ; ಮಾತಿನ ಮೇಲೆ ನಿಲ್ಲುವುದು! ಹುಡುಗ ಪಟ್ಟುಹಿಡಿಯುವ ಅಂಶಗಳನ್ನು ಗುರುತಿಸಿ, ಅವು ಸೂಕ್ತವಾಗಿದ್ದಲ್ಲಿ ಒಪ್ಪಿಕೊಳ್ಳಿ. ಹೊಡೆಯುವುದು, ಬಡಿಯುವುದು ಕೊನೆಯ ಮಾರ್ಗ. ಸಾಧ್ಯವಾದಷ್ಟು ಮಟ್ಟಿಗೆ ಒಪ್ಪಿಸಲು ಪ್ರಯತ್ನಿಸಿ. ಆಗಲೂ ಆತ ನೆಗೆಟಿವ್ ಆಗಿ, ಮೂರ್ಖನಾಗಿ ಮುಂದುವರಿದರೆ ಸೈಕಾಲಜಿಸ್ಟ್​ರನ್ನು ಭೇಟಿಮಾಡಿ.

ನೀವು ನಂಬುತ್ತೀರಾ? ತೆಲಂಗಾಣದ ಜಫ್ಪರ್​ಗಡ್ ಎಂಬಲ್ಲಿ ಪಿಯುಸಿ ಫೇಲಾದ ಒಬ್ಬ ಹುಡುಗ ಪಾಸಾಗಿದ್ದೇನೆಂದು ಮನೆಯಲ್ಲಿ ಹೇಳಿದ. ಕಾಜೀಪೇಟ್​ನ ಕಾಲೇಜ್​ನಲ್ಲಿ ಡಿಗ್ರಿಗೆ ಸೇರುತ್ತೇನೆಂದು ಹೇಳಿ ಅಪ್ಲಿಕೇಷನ್​ಗೆಂದು ದುಡ್ಡು ತೆಗೆದುಕೊಂಡ. ಅದು ಪ್ರಾರಂಭ. ನಂತರ ಕಾಲೇಜ್ ಫೀಸು, ಬಸ್​ಚಾರ್ಜು ಇತ್ಯಾದಿಗಾಗಿ ದುಡ್ಡು ಪಡೆದು ಅದರಲ್ಲಿ ಸಿನಿಮಾ, ಇಸ್ಟೀಟು… ಹೀಗೆ 3 ವರ್ಷ (!) ಕಾಲೇಜ್ ಹೆಸರು ಹೇಳಿ ಚಟಗಳಿಗೆ ಖರ್ಚುಗಳನ್ನು ಮೆನ್​ಟೇನ್ ಮಾಡಿದ.

ನೆಗೆಟಿವ್ ಇಂಟಲಿಜನ್ಸ್: ಆಹಾರಕ್ಕಾಗಿ ಮರವನ್ನು ಕುಟುಕುವುದು ಮರಕುಟಿಗ ಮರಿಗೆ ಹುಟ್ಟಿನಿಂದಲೇ ತಿಳಿದಿರುವ ಹಾಗೆ, ಮೊಟ್ಟೆಯಿಂದ ಹೊರಬಂದ ಕೂಡಲೆ ನೀರಿನ ಕಡೆ ಸಾಗಬೇಕೆಂದು ಆಮೆಯ ಮರಿಗೆ ತಿಳಿದಿರುವ ಹಾಗೆ ಕೆಲವು ಮಕ್ಕಳಿಗೆ ಅಪ್ಪ-ಅಮ್ಮನ ವೀಕ್​ನೆಸ್ ಹುಟ್ಟಿನಿಂದಲೇ ತಿಳಿದುಬಿಡುತ್ತದೆ. ದೊಡ್ಡವರ ವೀಕ್​ನೆಸ್​ಗಳ ಬಗ್ಗೆ ಸಿನಿಮಾ ತೆಗೆದರೆ ಟೈಟಲ್ಸ್ ಪ್ರಾರಂಭದಲ್ಲೇ ಕತೆಯ ಮುಕ್ತಾಯ ಹೇಳಬಲ್ಲ ಚಾಣಾಕ್ಷರು ಈ ಮಕ್ಕಳು.

ಸೂಪರ್ ಮಾರ್ಕೆಟ್​ನಲ್ಲಿ ತಾನು ಕೇಳಿದ ಚಾಕಲೇಟ್ ಕೊಡಿಸಲಿಲ್ಲವೆಂದು ಮಗ ಜೋರುಧ್ವನಿಯಲ್ಲಿ ಅತ್ತು ಜನರೆಲ್ಲ ನಿಮ್ಮ ಕಡೆಗೆ ನೋಡುವಂತೆ ಮಾಡುತ್ತಿದ್ದಾನೇನು? ಅವಳ ಮಾತಿಗೆ ‘ಇಲ್ಲ’ ಎಂದಿದ್ದಕ್ಕೆ ನಿಮ್ಮ ಹದಿನಾಲ್ಕರ ಮಗಳು ಎಲ್ಲರ ಎದುರು ಬಾಗಿಲನ್ನು ಧಡಾರೆಂದು ಹಾಕಿಕೊಂಡು ಹೋಗುತ್ತಾಳೇನು? ಅದೆಲ್ಲ ಹುಡುಗನ ಸಿಟ್ಟು, ಮಗಳ ದುಃಖ ಅಂದುಕೊಂಡಿರೇನು? ಅಲ್ಲ!… ಅಲ್ಲವೇ ಅಲ್ಲ!… ಅದೆಲ್ಲ ಎಮೋಷನಲ್ ಬ್ಲಾ್ಯಕ್​ವೆುೕಲಿಂಗ್.

‘ನೆಗೆಟಿವ್ಲೀ ಇಂಟೆಲಿಜೆಂಟ್’ ಮಕ್ಕಳು ಗಟ್ಟಿಯಾಗಿ ಅತ್ತು, ಕೈಕಾಲು ಬಡಿಯುತ್ತ, ಹತ್ತಾರು ಮಂದಿ ನೋಡುತ್ತಿರುವಾಗ, ಗಲಾಟೆ ಮಾಡಿ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಿದ್ದಾರೆ ಅಂದರೆ- ನೀವು ‘ಕೊಡಬಹುದೇ-ಇಲ್ಲವೇ’ ಎಂಬ ಯೋಚನೆಗಿಂತ, ಕೊಡಕೂಡದು ಎಂಬ ಛಲಕ್ಕಿಂತ, ‘ಜನ ಏನಂದುಕೊಳ್ಳುತ್ತಾರೋ ಎಂದು ಯೋಚಿಸುತ್ತೀರಿ’ ಎನ್ನುವುದು ಮಕ್ಕಳಿಗೆ ಈಗಾಗಲೇ ತಿಳಿದುಹೋಗಿದೆ ಎಂದರ್ಥ.

ಮಧ್ಯರಾತ್ರಿ, ಫ್ರಿಜ್​ನಲ್ಲಿರುವ ಐಸ್ಕ್ರೀಂ ಬೇಕೆನ್ನುತ್ತಾನೆ 6 ವರ್ಷದ ಮಗರಾಯ. ‘ನೆಗಡಿಯಾಗುತ್ತದೆ, ಬೇಡ’ ಎನ್ನುತ್ತಾಳೆ ತಾಯಿ. ಸೋಲಿಗೆ ತಲೆಬಾಗದ ಧೀರ ಮನೆ ಛಾವಣಿ ಹಾರಿಹೋಗುವ ಹಾಗೆ ಅಳಲಾರಂಭಿಸುತ್ತಾನೆ. ಕನಸಿನಲ್ಲಿ ರಂಭೆಯ ಜತೆ ರೊಮಾನ್ಸ್ ಮಾಡುತ್ತಿದ್ದ ತಂದೆಗೆ ನಿದ್ರಾಭಂಗವಾಗಿ ‘ಅವನನ್ನು ಯಾಕೇ ಹಾಗೆ ಅಳಿಸ್ತೀಯ? ಅವನು ಕೇಳಿದ್ದನ್ನು ಕೊಡಬಹುದಲ್ಲ?’ ಎಂದು ಕೂಗುತ್ತಾನೆ. ಗತ್ಯಂತರವಿಲ್ಲದೆ ಐಸ್ಕ್ರೀಂ ಕೊಡುತ್ತಾಳೆ ಅಮ್ಮ.

ಮೂವರೂ ಟ್ಯಾಕ್ಸಿಯಲ್ಲಿ ಟೂರ್ ಹೋಗಿದ್ದಾಗ ‘ಆನೆ ಹತ್ತುತ್ತೇನೆ’ ಎನ್ನುತ್ತಾನೆ ಮಗ. ‘ಬೇಡ ಬಿದ್ದುಬಿಡುತ್ತೀಯ’ ಅನ್ನುತ್ತಾನೆ ಅಪ್ಪ. ಆಗ ಅಮ್ಮನಲ್ಲಿಗೆ ಹೋಗಿ ‘ಅಮ್ಮಾ ಆನೆ.. ಅಮ್ಮಾ ಆನೆ’ ಎಂದು ರಾಗ ಎಳೆಯುತ್ತಾನೆ. ಸುತ್ತಮುತ್ತಲಿದ್ದ ಜನ ‘ಅರೆ, ಇವನ್ಯಾಕೆ ಅಮ್ಮನನ್ನು ಸರ್ವನಾಮದಿಂದ ಕರೆಯುತ್ತಿದ್ದಾನೆ’ ಎಂಬಂತೆ ವಿಚಿತ್ರವಾಗಿ ನೋಡಿದಾಗ ಆ ಸ್ಥೂಲಕಾಯದ ಹೆಂಗಸು ‘ಅವನನ್ನು ಆನೆ ಹತ್ತಿಸ್ತೀರಾ?’ ಎಂದು ಕೇಳುತ್ತಾಳೆ. ಗತ್ಯಂತರವಿಲ್ಲದೆ ಮಗನನ್ನು ಆನೆ ಹತ್ತಿಸುತ್ತಾನೆ ಅಪ್ಪ.

ಆಗ ಆ ಹುಡುಗನಿಗೊಂದು ವಿಶ್ವರಹಸ್ಯ ಅರ್ಥವಾಗುತ್ತದೆ: ‘ಹೊರಗಡೆ ಹೋದಾಗ ಅಮ್ಮನಿಗೆ ಸಿಟ್ಟು ಬರಿಸಿದರೆ ಅಪ್ಪನಿಂದ, ಮನೆಯಲ್ಲಿ ಅಪ್ಪನಿಗೆ ಕೋಪ ತರಿಸಿದರೆ ಅಮ್ಮನಿಂದ… ಒಟ್ಟಿನಲ್ಲಿ ಅಪ್ಪ-ಅಮ್ಮನನ್ನು ಸಿಟ್ಟಿಗೆಬ್ಬಿಸಿ ನನ್ನ ಕೆಲಸ, ಆಸೆ ಪೂರೈಸಿಕೊಳ್ಳಬಹುದು’.

ಮಕ್ಕಳಲ್ಲಿ ಹಠ ಕಡಿಮೆಯಾಗಬೇಕೆಂದರೆ ಗಂಡ-ಹೆಂಡತಿ ನಡುವೆ ಸಾಮರಸ್ಯ ಅಗತ್ಯ. ಒಬ್ಬರು ಬೈಯುತ್ತಿರುವಾಗ ಮತ್ತೊಬ್ಬರು ಮಾತಾಡಕೂಡದು. ಒಬ್ಬರು ಇಲ್ಲ ಎಂದಾಗ ಇನ್ನೊಬ್ಬರು ಕೊಡುತ್ತೇನೆ ಎನ್ನಬಾರದು. ‘ನೀನು ನಮ್ಮನ್ನು ಬೇರ್ಪಡಿಸಿ ಆಡಿಕೊಳ್ಳಲಾರೆ’ ಎಂಬ ವಿಷಯವನ್ನು ಮಗನಿ/ಳಿಗೆ ಸ್ಪಷ್ಟವಾಗಿ ಅರ್ಥವಾಗುವ ಹಾಗೆ ನಡೆದುಕೊಳ್ಳಬೇಕು.

ವೃತ್ತಿರೀತ್ಯಾ ಸಮಯಾಭಾವದ ಕಾರಣಕ್ಕೋ, ಪಾರ್ಟಿ ಮೊದಲಾದ ‘ಸೋಷಲೈಸಿಂಗ್ ಚಟುವಟಿಕೆಗಳ’ ಕಾರಣಕ್ಕೋ, ಮಕ್ಕಳನ್ನು ಒಂಟಿಯಾಗಿ ಬಿಡುವಾಗ ಕೀಳರಿಮೆ ಹೊಂದುವ ದೊಡ್ಡವರು, ತಮ್ಮ ಗಿಲ್ಟ್ ಮುಚ್ಚಿಡುವುದಕ್ಕಾಗಿ ಅವರಿಗೆ ಸ್ವಾತಂತ್ರ್ಯ, ಪಾಕೆಟ್​ವುನಿ ಕೊಡುತ್ತಾರೆ. ದುಡ್ಡಿರುವವರಾದರೆ ದುಬಾರಿ ಕಾರ್​ಗಳನ್ನು ಕೊಡುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದೆಂದು ಮಕ್ಕಳಿಗೆ ಮತ್ತಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಅದಕ್ಕೆ ‘ಪ್ರೀತಿ’ ಎಂದು ಹೆಸರಿಡುತ್ತಾರೆ. ಆದರೆ ಅದು ಪ್ರೀತಿಯಲ್ಲ. ಅದನ್ನೇನನ್ನುತ್ತಾರೋ ನಿಮಗೆ ಗೊತ್ತಿದೆ.

ಅತಿಮುದ್ದು (Pampering): ಪ್ರೀತಿ ಮಿತಿಮೀರಿದರೆ ಅತಿಮುದ್ದು ಎನ್ನಬಹುದು. ‘ಅನ್​ಕಂಡಿಷನಲ್ ಲವ್’ ಎಂದರೆ ಮಾಡಿದ ಪ್ರತಿ ಕೆಲಸಕ್ಕೆ ‘ದಂಡನೆ ಇಲ್ಲದ ಅಂಗೀಕಾರ’ ಎಂದಲ್ಲ. ಪ್ರೀತಿ ಬೇರೆ, ಈ ಅತಿಮುದ್ದು ಬೇರೆ. ಅತಿಮುದ್ದು ಎಂದರೆ ಮಿತಿಯಿಲ್ಲದ ಪ್ರೀತಿ. ಮಕ್ಕಳನ್ನು ಅತಿಪ್ರೀತಿಯಿಂದ ಬೆಳೆಸುವುದನ್ನು ‘ಹೈಪರ್ ಪೇರೆಂಟಿಂಗ್’ ಅನ್ನುತ್ತಾರೆ. ಇದು 4 ಕಾರಣಗಳಿಂದ ಬರುತ್ತದೆ-

ಓದುತ್ತಿದ್ದ ದಿನಗಳಲ್ಲಿ ಆದ ‘ಸ್ವಂತ ವೈಫಲ್ಯ’. ್ಞ ಮಕ್ಕಳ (ಇರದ) ಗ್ರೇಟ್​ನೆಸ್ ಅನ್ನು ಇತರರ ಮುಂದೆ ಪ್ರದರ್ಶಿಸಿದಾಗ ಸಿಗುವ ಕಿಕ್. ್ಞ ‘ಬಾಲ್ಯದಲ್ಲಿ ಬಹಳ ಕಷ್ಟಪಟ್ಟಿದ್ದೇವೆ, ಮಕ್ಕಳಾದರೂ ಸಂತೋಷದಿಂದ ಇರಲಿ’ ಎಂಬ ಸಿಂಡ್ರೋಮ್ ್ಞ ಮಕ್ಕಳ ಜತೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ‘ಅಪರಾಧಿ ಪ್ರಜ್ಞೆ’.

ಕೇಳಿದ ಬಯಕೆಗಳನ್ನೆಲ್ಲ ತೀರಿಸುತ್ತ, ಅವರು ಸ್ಪೆಷಲ್ ಎಂಬ ಭಾವನೆ ಬರಿಸುವಂತೆ ಮಾಡಿದರೆ, ಮಕ್ಕಳು ಈಗೋಯಿಸ್ಟಿಕ್ ಆಗಿಯೋ, ಅಟೆನ್ಷನ್ ಸೀಕರ್ಸ್ ಆಗಿಯೋ ತಯಾರಾಗುತ್ತಾರೆ. ಆ ರೀತಿಯಲ್ಲಿ ಮಕ್ಕಳು ಬೆಳೆದು ಮುಂದೆ ತಮ್ಮ ಮಕ್ಕಳನ್ನು ಅದೇ ರೀತಿ ಮಿತಿಯಿರದ ವ್ಯಾಮೋಹದಿಂದ ಬೆಳೆಸುತ್ತಾರೆ. ಆಗ ‘ಅತಿಮುದ್ದು’ ಎನ್ನುವುದು ಆ ಕುಟುಂಬಕ್ಕೆ, ಸುವರ್ಣಭೂಮಿಯಾಗುತ್ತದೆ, ಅದು ಅವರ ಅಡ್ವರ್ಟೆಸ್​ವೆುಂಟ್​ನ ಹಾಗೆ ತಲೆತಲಾಂತರದ ಅಳಿಸಲಾಗದ ಮಚ್ಚೆಯಾಗುತ್ತದೆ.

ಈ ರೀತಿಯ ನಾಲ್ಕನೆಯ ತಲೆಮಾರು ಈಗಾಗಲೇ ತಯಾರಾಗುತ್ತಿದೆ. ಈ ತಲೆಮಾರಿನ ಹಿರಿಯರು ತಮ್ಮ ಟಿ.ವಿ., ಷಾಪಿಂಗ್, ಸುದೀರ್ಘ ಫೋನ್ ಸಂಭಾಷಣೆ ಮೊದಲಾದ ದುರಭ್ಯಾಸಗಳಿಗೆ ಅಡ್ಡಿಬಾರದಂತೆ ಮಕ್ಕಳಿಗೆ ಕೆಲಸಕ್ಕೆ ಬಾರದ ‘ಯಾವುದೋ’ ಒಂದು ದುರಭ್ಯಾಸ ಕಲಿಸುತ್ತಿರುವುದು ವಿಷಾದದ ವಿಚಾರ.

ಮಕ್ಕಳಿಗೆ ಎಲ್ಲ ‘ಬೆಸ್ಟ್’ ಕೊಡಬೇಕೆಂದುಕೊಳ್ಳುವ ತಂದೆ-ತಾಯಿಯ ಉದ್ದೇಶ ಒಳ್ಳೆಯದೇ. ಆದರೆ ಅದಕ್ಕೂ ಮೊದಲು ತಾವು ಕೊಡುತ್ತಿರುವುದು… ಅವರ ಸೋಮಾರಿತನ, ಭಯ, ನಿರ್ಲಕ್ಷ್ಯ, ಸೊಕ್ಕು ಮೊದಲಾದ ಬಿತ್ತನೆಗೆ ನೀರು ಹೊಯ್ಯಬಹುದೇ? ಎಂಬ ವಿಷಯ ತಿಳಿದುಕೊಳ್ಳಬೇಕು. ಕೆಲ ದೊಡ್ಡವರು ಇದನ್ನು ಒಪ್ಪಿಕೊಳ್ಳದೇ ಇರಬಹುದು. ‘ನಮ್ಮಲ್ಲಿ ಇದೆಯಲ್ಲ- ಕೊಟ್ಟರೆ ತಪ್ಪೇನಿದೆ?’ ಎಂಬ ವಾದಕ್ಕೆ ಒಬ್ಬ ಸೈಕಿಯಾಟ್ರಿಸ್ಟ್ ಆಗಿ ನನ್ನ ಅನುಭವಗಳಲ್ಲಿ ಕೆಲವನ್ನು ಹೇಳುತ್ತೇನೆ.

34ರ ಯುವಕ ಹೆಂಡತಿಯೊಂದಿಗೆ ಕೌನ್ಸಿಲಿಂಗ್​ಗೆ ಬಂದ. ಆಕೆ ಅವನಿಂದ ವಿಚ್ಛೇದನ ಬಯಸಿದ್ದಳು. ಕಾರಣ, ಅವನು ಯಾವ ನೌಕರಿಯಲ್ಲೂ 2 ತಿಂಗಳಿಗಿಂತ ಹೆಚ್ಚು ನಿಲ್ಲುತ್ತಿಲ್ಲ. ಕಾರಣ ಕೇಳಿದರೆ ‘ಆ ಕೆಲಸದಲ್ಲಿ ಸ್ಟ್ರೆಸ್ ಜಾಸ್ತಿ’ ಎನ್ನುತ್ತಾನೆ. ಆ ರೀತಿ 8 ನೌಕರಿ ಬಿಟ್ಟಿದ್ದ. ಬಾಲ್ಯದಲ್ಲಿ ಸ್ಕೂಲ್​ಗೆ ಹೋಗಬೇಕಾದಾಗಲೂ ಹೀಗೇ ನಿರಾಕರಿಸುತ್ತಿದ್ದನಂತೆ. ಇವನ ತಂದೆ ರಿಯಲ್ ಎಸ್ಟೇಟ್ ವೃತ್ತಿಯಲ್ಲಿದ್ದವ. ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದ. ಈಗಲೂ ಅಷ್ಟೇ, ಕೆಲಸ ಬಿಟ್ಟಕೂಡಲೆ ತಂದೆ-ತಾಯಿ ಬಳಿ ಸಮಸ್ಯೆ ಹೇಳಿಕೊಳ್ಳುತ್ತಾನೆ. ಅವರು 2-3 ತಿಂಗಳಿಗಾಗುವಷ್ಟು ದುಡ್ಡು ಕೊಟ್ಟು ಕಳಿಸುತ್ತಾರೆ. ತಾವು ‘ಷಾಕ್ ಅಬ್ಸಾರ್ಬರ್ಸ್’ನ ಹಾಗೆ ನಡೆದುಕೊಳ್ಳುತ್ತ ಇವನನ್ನು ‘ಕಂಫರ್ಟ್ ಜೋನ್’ನೊಳಗೆ ತಳ್ಳುತ್ತಿರುವುದನ್ನು ಅವರು ಗುರುತಿಸುತ್ತಿಲ್ಲ.

28 ವಯಸ್ಸಿನ ಆಕೆಗೆ 6 ತಿಂಗಳ ಹಿಂದೆ ಮದುವೆಯಾಯಿತು, ಆದರೆ ತೌರಿಗೆ ಬಂದುಬಿಟ್ಟಿದ್ದಾಳೆ. ವಾಪಸ್ ಹೋಗುವುದಿಲ್ಲ ಎನ್ನುತ್ತಿದ್ದಾಳೆ. ಕಾರಣ ಅತ್ತ ಆಫೀಸು, ಇತ್ತ ಮನೆಕೆಲಸ ಮಾಡಲು ಸಾಧ್ಯವಾಗದಿರುವುದು. ಅಮ್ಮ ತನ್ನೊಂದಿಗೆ ಬಂದು ಮನೆಕೆಲಸಗಳನ್ನು ನೋಡಿಕೊಂಡರೆ ಮಾತ್ರ ‘ಅಲ್ಲಿಗೆ’ ಹೋಗುತ್ತೇನೆಂದು ಶಪಥಮಾಡಿ ಕುಳಿತಳು. ‘ಈ ರೀತಿ ನಿಮ್ಮಮ್ಮ ಎಷ್ಟು ಕಾಲ ನಿಮ್ಮ ಜತೆ ಇದ್ದಾಳು?’ ಎಂಬ ಪ್ರಶ್ನೆಗೆ ಅವಳಲ್ಲಿ ಉತ್ತರವಿಲ್ಲ.

ಇಂಜಿನಿಯರಿಂಗ್ ಓದುತ್ತಿದ್ದ ತರುಣನೊಬ್ಬ ತಾಯಿಯೊಂದಿಗೆ ಕೌನ್ಸಿಲಿಂಗ್​ಗೆ ಬಂದ. ಕೆಲ ವರ್ಷಗಳ ಹಿಂದೆ ತಂದೆ ಮರಣಿಸಿದ್ದ. ಒಬ್ಬನೇ ಮಗ. ವಿದ್ಯೆಯೆಂದರೆ ಇಷ್ಟವಿಲ್ಲ, ಡಿಗ್ರಿ ಪೂರ್ತಿ ಮಾಡುವುದಿಲ್ಲ ಎನ್ನುತ್ತಾನೆ. ಅದಕ್ಕೆ ಕಾರಣ ನಿಜವಾದದ್ದೇ ಆಗಿರಬಹುದು. ಸಬ್ಜೆಕ್ಟ್​ಗಳು ಅರ್ಥವಾಗದೆ ಗೊಂದಲಗೊಳಿಸಿರಬಹುದು. ಆದರೆ ಸಮಸ್ಯೆ ಅದಲ್ಲ. ಆ ಹುಡುಗ ಯಾವ ಕೆಲಸವನ್ನೂ ಮಾಡಲಾರ. ಅಷ್ಟು ವಯಸ್ಸು ಬಂದರೂ ತಾಯಿಯನ್ನು ಅವಲಂಬಿಸಿದ್ದಾನೆ. ಅದೂ ಮಾಮೂಲಿನಂತಲ್ಲ. ದುಡ್ಡು ಕೊಡುವವರೆಗೆ ಕಾಟ ಕೊಡುತ್ತಾನೆ. ಅಷ್ಟು ದುಡ್ಡು ತಂದು ಕೊಡುವುದಕ್ಕೆ ತಾಯಿ ಎಷ್ಟು ಕಷ್ಟಪಡುತ್ತಾಳೆ ಎಂದು ಕೂಡ ಯೋಚಿಸುವುದಿಲ್ಲ.

ಮಗನ ಸುತ್ತ ಪೋಷಕರು ಹಾಕಿದ್ದ ‘ಬೇಲಿ’ ಅವನನ್ನು ಹೀಗೆ ತಯಾರು ಮಾಡಿದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದನ್ನು Parent Induced Wastefulness (PIW) ಎನ್ನುತ್ತಾರೆ.

ಹೀಗೆ ಅದೆಷ್ಟೋ ಸಮಸ್ಯೆಗಳು. ಪ್ರತಿಯೊಂದು ಸಮಸ್ಯೆ, ಅದಕ್ಕೆ ನಾವು ಸೂಚಿಸುವ ಪರಿಹಾರಗಳ ವಿವರಗಳನ್ನು ಇಲ್ಲಿ ಸ್ಥಳಾಭಾವದಿಂದ ಬರೆದಿಲ್ಲ. ಆದರೆ ಆಳವಾಗಿ ವಿಶ್ಲೇಷಣೆ ಮಾಡಿದರೆ ದೊಡ್ಡವರು ಮಕ್ಕಳನ್ನು ಬೆಳೆಸುವ ಕ್ರಮವೇ ಇಂತಹ ವಿಪರೀತ ಮನಸ್ಥಿತಿಗೆ, ನಡವಳಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಅರ್ಥವಾಗುತ್ತದೆ.

(ಲೇಖಕರು ಖ್ಯಾತ ಕಾದಂಬರಿಕಾರರು, ವ್ಯಕ್ತಿತ್ವ ವಿಕಸನ ತರಬೇತುದಾರರು)

Leave a Reply

Your email address will not be published. Required fields are marked *

Back To Top