More

  ಪರ್ಯಾಯ ಜಮೀನಲ್ಲಿ ಹರನಾಲಯ

  ಅನ್ಸಾರ್ ಇನೋಳಿ ಉಳ್ಳಾಲ
  ಹಲವಾರು ವರ್ಷಗಳ ಹಿಂದೆ ಭೂಗರ್ಭ ಸೇರಿ ಎನ್ನಲಾಗಿರುವ ಹರೇಕಳ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. ಪರ್ಯಾಯ ಜಮೀನಿನಲ್ಲಿ ನಡೆಯುತ್ತಿರುವ ಕಾಮಗಾರಿ ವರ್ಷದೊಳಗೆ ಒಂದು ಹಂತ ತಲುಪುವ ನಿರೀಕ್ಷೆ ಹೊಂದಲಾಗಿದೆ.

  ಹರೇಕಳ ಸಂಪಿಗೆದಡಿಯಲ್ಲಿದ್ದ ಅರ್ಧನಾರೀಶ್ವರ ದೇವಸ್ಥಾನ ಸುಮಾರು 600 ವರ್ಷಗಳ ಹಿಂದೆ ಭೂಗರ್ಭ ಸೇರಿತ್ತು. ಇದರಿಂದ ಗ್ರಾಮದ ಜನರು ಸಂಕಷ್ಟ ಅನುಭವಿಸಿದ್ದರಿಂದ ದೇವಸ್ಥಾನಕ್ಕೆ ಸಂಬಂಧಪಟ್ಟವರು ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಈ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನ ಇದ್ದ ಜಮೀನಿನಲ್ಲಿ ಅದಕ್ಕೆ ಸಂಬಂಧಿತ ಕುರುಹುಗಳೂ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಪ್ರಮುಖರು ಮುಂದಾದರು. ಮೂಲ ಜಮೀನು ಅನ್ಯ ಸಮುದಾಯದ ವಶದಲ್ಲಿದ್ದು ಅದರ ಖರೀದಿಗೆ ಪ್ರಮುಖರು ಮುಂದಾದರೂ ಅದು ಸಾಧ್ಯವಾಗದ ಕಾರಣ ಪಕ್ಕದ ಗುಡ್ಡದಲ್ಲಿ ಜಮೀನು ಗೊತ್ತು ಮಾಡಿ ಸಮತಟ್ಟುಗೊಳಿಸಿ ಕಾಮಗಾರಿ ಆರಂಭಿಸಲಾಗಿದೆ.
  ಸಂಪೂರ್ಣ ಕಾಮಗಾರಿಗೆ 3 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಹರೇಕಳ ತೀರ ಗ್ರಾಮೀಣ ಭಾಗ ಆಗಿದ್ದು, ಗ್ರಾಮದಲ್ಲಿ ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವುದರಿಂದ ಇಷ್ಟೊಂದು ದೊಡ್ಡ ಮೊತ್ತ ಹೊಂದಿಸುವುದು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖಾಂತರ ಶಾಸಕರು, ಉಸ್ತುವಾರಿ ಸಚಿವರು, ಸಂಸದರ ಅನುದಾನದ ನಿರೀಕ್ಷೆ ಇಟ್ಟುಕೊಂಡಿರುವ ದೇವಸ್ಥಾನ ನಿರ್ಮಾಣಕ್ಕೆ ಮುಂದಡಿ ಇಟ್ಟವರು ಕಾಮಗಾರಿಗೆ ವೇಗ ನೀಡಿದ್ದಾರೆ.

  ಗರ್ಭಾನ್ಯಾಸ, ನಿಧಿಕುಂಭಕ್ಕೆ ಸಜ್ಜು
  ಪ್ರಸ್ತುತ ಕಾರ್ಯಾಧ್ಯಕ್ಷ ಟಿ.ರಘುರಾಮ ಪೂಂಜ, ಅಧ್ಯಕ್ಷ ಟಿ.ರಾಜೀವ ಆಳ್ವ, ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ರವಿರಾಜ್ ರೈ ಎಲ್ಯಾರ್, ತನಿಯಪ್ಪ ಪೂಜಾರಿ ಹರೇಕಳ, ಮನಿಪು ನಾರಾಯಣ ಗಟ್ಟಿ, ಕೋಶಾಧಿಕಾರಿ ಸದಾಶಿವ ಸಾಮಾನಿ, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯಾಧ್ಯಕ್ಷ ಮೋಹನ್‌ದಾಸ್ ರೈ ದೆಬ್ಬೇಲಿಗುತ್ತು ನೇತೃತ್ವದ ಸಮಿತಿ ಸ್ಥಳೀಯರ ಸಹಕಾರ ಪಡೆದು ಕೆಲಸಕ್ಕೆ ವೇಗ ನೀಡಿದ್ದಾರೆ. ಶಿಲಾಕಲ್ಲುಗಳ ಕೆತ್ತನೆ ಕಾರ್ಯ ಭರದಿಂದ ನಡೆಯುತ್ತಿದ್ದು ಗರ್ಭಾನ್ಯಾಸ, ನಿಧಿಕುಂಭಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಗ್ರಾಮೀಣ ಭಾಗದಲ್ಲಿರುವ ಜನರ ಸಂಕಷ್ಟಕ್ಕೆ ಪೂರ್ಣ ವಿರಾಮ ನೀಡಬಲ್ಲಂಥ ದೇವಾಲಯ ಈ ವರ್ಷವೇ ಎದ್ದು ನಿಲ್ಲುವುದು ಕಷ್ಟವಲ್ಲ.

  ದೇವಳ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ. ಈ ತಿಂಗಳ ಕೊನೆಯಲ್ಲಿ ಗರ್ಭಾನ್ಯಾಸ, ನಿಧಿಕುಂಭ ನೆರವೇರಿಸಲಿದ್ದು, ಜನರು ಶಿಲಾನ್ಯಾಸ ಸಂದರ್ಭ ಸಹಕರಿಸಿದಂತೆ ಮುಂದಕ್ಕೂ ಸಹಕರಿಸಬೇಕು. ಹರೇಕಳ ಗ್ರಾಮೀಣ ಭಾಗವಾಗಿರುವುದರಿಂದ ಹೊರಗಿನವರ ಸಹಕಾರವೂ ಅಗತ್ಯ.
  ರಾಜೀವ್ ಆಳ್ವ, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts