ಪಾಟೀದಾರ್‌ ಮೀಸಲು ಹೋರಾಟ: ಹಾರ್ದಿಕ್‌ ಪಟೇಲ್‌ಗೆ 2 ವರ್ಷ ಜೈಲು

ವಿಸ್ನಾಗರ್‌(ಗುಜರಾತ್‌): ಪಾಟೀದಾರ್‌ ಮೀಸಲಾತಿ ಹೋರಾಟದಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸ್ಥಳೀಯ ನ್ಯಾಯಾಲಯ ಪಾಟೀದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

2015ರಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಟೀದಾರ್‌ ಸಮುದಾಯದವರನ್ನು ದಂಗೆ ಎಬ್ಬಿಸಿದ ಆರೋಪದಲ್ಲಿ ಹಾರ್ದಿಕ್‌ ಪಟೇಲ್‌ ತಪ್ಪಿತಸ್ಥರು ಎಂದು ತೀರ್ಮಾನಿಸಿರುವ ವಿಸ್ನಾಗರ್‌ ನ್ಯಾಯಾಲಯ ಎರಡು ವರ್ಷ ಜೈಲುಶಿಕ್ಷೆಯನ್ನು ವಿಧಿಸಿದೆ.

ಹಾರ್ದಿಕ್‌ ಅವರೊಂದಿಗೆ ಲಾಲ್‌ ಜಿ ಪಟೇಲ್‌ ಮತ್ತು ಎ.ಕೆ. ಪಟೇಲ್‌ ಅವರನ್ನು ತಪ್ಪಿತಸ್ಥರು ಎಂದು ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ ಮೂವರಿಗೂ ತಲಾ 50 ಸಾವಿರ ದಂಡ ವಿಧಿಸಿದೆ.

ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಋಷಿಕೇಷ್‌ ಪಟೇಲ್‌ ಅವರ ಕಚೇರಿಯನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಪಟೇಲ್‌ ಕೂಡ ಆರೋಪಿಯಾಗಿದ್ದರು. ಈ ಸಂಬಂಧ ಸುಮಾರು 17 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹಾರ್ದಿಕ್‌ ಪಟೇಲ್‌ ಅವರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ 2015ರಲ್ಲಿ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ವೇಳೆ ತಮ್ಮ ಬೆಂಬಲಿಗರಿಗೆ ಮೀಸಲಾತಿಗಾಗಿ ಒತ್ತಾಯಿಸಿ ಪೊಲೀಸರನ್ನು ಹತ್ಯೆ ಮಾಡಲು ಮತ್ತು ಆತ್ಮಹತ್ಯೆಗೆ ಪ್ರಚೋದಿಸುವಂತಹ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.

ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಪಾಟೀದಾರ್‌ ಸಮುದಾಯ ಬಂಡಾಯ ಎದ್ದ ಬಳಿಕ ಹಾರ್ದಿಕ್‌ ಪಟೇಲ್‌ರನ್ನು ಬಂಧಿಸಿ ಸೂರತ್ ಜೈಲಿನಲ್ಲಿಡಲಾಗಿತ್ತು.

ಪಟೇಲ್ ಅವರ ಬಂಧನವನ್ನು ಖಂಡಿಸಿ ರಾಜ್ಯದ ಕೆಲವು ಪಟ್ಟಣಗಳಲ್ಲಿ ಅವರ ಬೆಂಬಲಿಗರಿಂದ ದೊಡ್ಡ ಪ್ರಮಾಣದ ಹಿಂಸಾಚಾರ ಉಂಟಾಗಿತ್ತು. (ಏಜೆನ್ಸೀಸ್)