ಮುಂಬೈಗೆ ಮತ್ತೆ ಜಯ, ಆರ್​ಸಿಬಿಗೆ ಸಪ್ತ ಸೋಲು

ಮುಂಬೈ: 12ನೇ ಆವೃತ್ತಿಯ ಐಪಿಎಲ್​ನಲ್ಲಿ ಕಳಪೆ ನಿರ್ವಹಣೆ ಮುಂದುವರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ 7ನೇ ಸೋಲು ಕಂಡಿತು. ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಸಂಘಟಿತ ನಿರ್ವಹಣೆ ಎದುರು ಮಂಕಾದ ಆರ್​ಸಿಬಿ 5 ವಿಕೆಟ್​ಗಳಿಂದ ಶರಣಾಯಿತು. ಈ ಸೋಲಿನೊಂದಿಗೆ ಆರ್​ಸಿಬಿ ತಂಡ ಮುಂದಿನ ಹಾದಿ ಬಹುತೇಕ ಬಂದ್ ಆದಂತಾಗಿದೆ. ಜತೆಗೆ ಪ್ರಸಕ್ತ ಟೂರ್ನಿಯಲ್ಲಿ ಮುಂಬೈ ವಿರುದ್ಧ ಆಡಿದ ಎರಡೂ ಮುಖಾಮುಖಿಯಲ್ಲೂ ಆರ್​ಸಿಬಿ ಸೋಲು ಕಂಡಿತು.

ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ, ಸ್ಪೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ (75ರನ್, 51 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಮೊಯಿನ್ ಅಲಿ (50ರನ್, 32 ಎಸೆತ, 1 ಬೌಂಡರಿ, 5 ಸಿಕ್ಸರ್) ಜೋಡಿ ಅಬ್ಬರದ ಬ್ಯಾಟಿಂಗ್ ಫಲವಾಗಿ 7 ವಿಕೆಟ್​ಗೆ 17 1ರನ್ ಕಲೆಹಾಕಿತು. ಪ್ರತಿಯಾಗಿ ಮುಂಬೈ ತಂಡ 19 ಓವರ್​ಗಳಲ್ಲಿ 5 ವಿಕೆಟ್​ಗೆ 172 ರನ್​ಗಳಿಸಿ ಜಯದ ನಗೆ ಬೀರಿತು.

ಮುಂಬೈ ಬ್ಯಾಟ್ಸ್​ಮನ್​ಗಳ ಅಬ್ಬರ: ಆರ್​ಸಿಬಿ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮೂರು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಗಿಟ್ಟಿಸಿಕೊಂಡಿತು. ಆರಂಭಿಕರಾದ ನಾಯಕ ರೋಹಿತ್ ಶರ್ಮ (28ರನ್, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಕ್ವಿಂಟನ್ ಡಿ ಕಾಕ್ (40ರನ್, 26 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿಯಿಂದ ಆರ್​ಸಿಬಿ ಬೌಲರ್​ಗಳು ದಂಡನೆಗೆ ಒಳಗಾದರು. ಪ್ರತಿ ಓವರ್​ಗೆ ಸರಾಸರಿ 10ರಂತೆ ರನ್ ಪೇರಿಸಿದ ಈ ಜೋಡಿ 7ನೇ ಓವರ್​ಗೆ 70 ರನ್ ಕಲೆಹಾಕಿತು. ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಮುಂಬೈಗೆ ಆರ್​ಸಿಬಿ ಬೌಲರ್ ಮೊಯಿನ್ ಅಲಿ ಬ್ರೇಕ್ ಹಾಕಿದರು. 8ನೇ ಓವರ್ ಎಸೆದ ಮೊಯಿನ್ ಅಲಿ ಈ ಜೋಡಿಯನ್ನು ಡಗೌಟ್​ಗೆ ಅಟ್ಟುವ ಮೂಲಕ ಮೊಯಿನ್ ಆರ್​ಸಿಬಿ ಪಾಳಯಕ್ಕೆ ಕೊಂಚ ನೆಮ್ಮದಿ ತಂದರು. ಬಳಿಕ ಜತೆಯಾದ ಸೂರ್ಯಕುಮಾರ್ ಯಾದವ್ (29) ಹಾಗೂ ಇಶಾನ್ ಕಿಶನ್ (21) ಕೂಡ ಕೆಲಕಾಲ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಈ ಜೋಡಿಯ ಅಬ್ಬರದಿಂದಾಗಿ ಮುಂಬೈ ತಂಡ 10 ಓವರ್​ಗಳಲ್ಲೇ 100ರ ರನ್ ಗಡಿ ದಾಟಿತು. ಇವರಿಬ್ಬರಿಗೂ ಡಗೌಟ್ ದಾರಿ ತೋರಿದ ಚಾಹಲ್ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಅಂತಿಮವಾಗಿ ಪಾಂಡ್ಯ ಸಹೋದರರಾದ ಕೃನಾಲ್ (11ರನ್, 21 ಎಸೆತ, 1 ಬೌಂಡರಿ) ಹಾಗೂ ಹಾರ್ದಿಕ್ (37*ರನ್, 16 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿ ಆರ್​ಸಿಬಿ ಬೌಲರ್​ಗಳಿಗೆ ತಿರುಗೇಟು ನೀಡಿತು. ಗೆಲುವಿನಂಚಿನಲ್ಲಿ ಕೃನಾಲ್ ನಿರ್ಗಮಿಸಿದರು. ಪವನ್ ನೇಗಿ ಎಸೆದ 19ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ, 2 ಬೌಂಡರಿ, 2 ಸಿಕ್ಸರ್​ನೊಂದಿಗೆ 22 ರನ್ ಸಿಡಿಸಿ ಇನ್ನೂ ಒಂದು ಓವರ್ ಇರುವಂತೆ ತಂಡಕ್ಕೆ ಜಯ ನೀಡಿದರು.

ಸಿಡಿದ ಡಿವಿಲಿಯರ್ಸ್-ಮೊಯಿನ್ ಅಲಿ

ಹಿಂದಿನ ಪಂದ್ಯದ ಗೆಲುವಿನ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದ ಆರ್​ಸಿಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ವಿರಾಟ್ ಕೊಹ್ಲಿ (8) ಆರಂಭದಲ್ಲೇ ಮುಗ್ಗರಿಸಿದರು. ಕೊಹ್ಲಿ, ಬೆಹ್ರನ್​ಡಾರ್ಫ್ ಎಸೆತದಲ್ಲಿ ವಿಕೆಟ್ ಕೀಪರ್ ಡಿಕಾಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಎಂದಿನಂತೆ ಆರಂಭದಲ್ಲಿ ಅಬ್ಬರಿಸಿದರೂ ಪಾರ್ಥಿವ್ ಪಟೇಲ್ (28ರನ್, 20 ಎಸೆತ, 4 ಬೌಂಡರಿ, 1 ಸಿಕ್ಸರ್) ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ಆರಂಭಿಕರ ನಿರ್ಗಮನದ ಬಳಿಕ ಜತೆಯಾದ ಡಿವಿಲಿಯರ್ಸ್ ಹಾಗೂ ಆಲ್ರೌಂಡರ್ ಮೊಯಿನ್ ಅಲಿ (50ರನ್, 32 ಎಸೆತ, 1 ಬೌಂಡರಿ, 5 ಸಿಕ್ಸರ್) ಜೋಡಿ ನಿಧಾನಗತಿ ಬ್ಯಾಟಿಂಗ್ ಮೂಲಕ ವಿಕೆಟ್ ಕಾಯ್ದುಕೊಂಡಿತು. ಹಿಂದಿನ ಪಂದ್ಯಗಳಲ್ಲಿ ರನ್​ಗಳಿಸಲು ಪರದಾಡುತ್ತಿದ್ದ ಮೊಯಿನ್ ಅಲಿ, ಮತ್ತೊಂದು ತುದಿಯಲ್ಲಿದ್ದ ಎಬಿ ಡಿವಿಲಿಯರ್ಸ್​ಗೆ ಅಗತ್ಯ ಸಾಥ್ ನೀಡಿದರು.ಡಿವಿಲಿಯರ್ಸ್- ಮೊಯಿನ್ ಜೋಡಿ 3ನೇ ವಿಕೆಟ್​ಗೆ 95 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಪ್ರಸಕ್ತ ಐಪಿಎಲ್​ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಮೊಯಿನ್ ಅಲಿ, ಲಿಸಿತ್ ಮಾಲಿಂಗ ಎಸೆತದಲ್ಲಿ ಬೌಂಡರಿನಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಇದೇ ಓವರ್​ನಲ್ಲೇ ಮಾರ್ಕಸ್ ಸ್ಟೋಯಿನಿಸ್ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು. ಸ್ಲಾಗ್ ಓವರ್​ಗಳಲ್ಲಿ ಅಬ್ಬರಿಸುವ ಆರ್​ಸಿಬಿ ಪ್ರಯತ್ನವನ್ನು ಮಾಲಿಂಗ ಮೆಟ್ಟಿನಿಂತರು.