ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ, ಯಾವುದೇ ಕರೆ ಸ್ವೀಕರಿಸುತ್ತಿಲ್ಲವಂತೆ ಹಾರ್ದಿಕ್​ ಪಾಂಡ್ಯ!

ಮುಂಬೈ: ಟಿವಿ ಷೋವೊಂದರಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಕ್ರಿಕೆಟ್​ ಪಟು ಹಾರ್ದಿಕ್​ ಪಾಂಡ್ಯ ಮನೆಯಿಂದ ಹೊರ ಹೋಗಲು ನಿರಾಕರಿಸುತ್ತಿದ್ದಾರೆ ಮತ್ತು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲವಂತೆ.

ಹೌದು, ಈ ಕುರಿತು ಹಾರ್ದಿಕ್​ ತಂದೆ ಹಿಮಾಂಶು ಮಾತನಾಡಿದ್ದು, ಆಸ್ಟ್ರೇಲಿಯಾದಿಂದ ಮನೆಗೆ ವಾಪಸಾದಾಗಿನಿಂದ ಹಾರ್ದಿಕ್​ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ. ಮಕರ ಸಂಕ್ರಾಂತಿ ಕೂಡ ಆಚರಿಸಿಲ್ಲ ಎಂದಿದ್ದಾರೆ.

ಅಡಿಲೇಡ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾದ ಎರಡನೇ ಏಕದಿನ ಪಂದ್ಯ ವೀಕ್ಷಿಸಿದ. ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿ ಸಂಭ್ರಮ ಪಡುವುದೆಂದರೆ ಹಾರ್ದಿಕ್​ಗೆ ತುಂಬಾ ಇಷ್ಟ. ಆದರೆ ಈಗಿರುವ ಸ್ಥಿತಿಯಲ್ಲಿ ಹಾರ್ದಿಕ್​ ಯಾವುದೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿಲ್ಲ. ಅಮಾನತುಗೊಂಡಾಗಿನಿಂದ ಭಾರಿ ನಿರಾಶೆಗೊಂಡಿದ್ದಾನೆ. ಟಿವಿ ಷೋನಲ್ಲಿ ಕೊಟ್ಟ ಹೇಳಿಕೆಗಾಗಿ ಪಶ್ಚಾತಾಪ ಪಡುತ್ತಿದ್ದಾನೆ ಎಂದಿದ್ದಾರೆ.

ಮನೆಯಲ್ಲಿ ಯಾರೂ ಈ ವಿಷಯದ ಕುರಿತು ಹಾರ್ದಿಕ್​ ಜತೆ ಚರ್ಚೆ ಮಾಡದಂತೆ ನಿರ್ಧರಿಸಿದ್ದೇವೆ. ಹಿರಿಯ ಮಗ ಕೃಣಾಲ್​ ಕೂಡ ಇದರ ಬಗ್ಗೆ ಹಾರ್ದಿಕ್​ ಜತೆ ಮಾತನಾಡಿಲ್ಲ. ಬಿಸಿಸಿಐನ ಮುಂದಿನ ನಿರ್ಧಾರಕ್ಕೆ ನಾವು ಕಾಯುತ್ತಿದ್ದೇವೆ ಎಂದರು.

ಚಾಟ್​ ಷೋನಲ್ಲಿ ಸಿಕ್ಸಿಸ್ಟ್​ ಕಾಮೆಂಟ್​ ಮಾಡಿ ಬಿಸಿಸಿಐನಿಂದ ಅಮಾನತುಗೊಂಡಿರುವ ಹಾರ್ದಿಕ್​ ಪಾಂಡ್ಯ ಮತ್ತು ಕೆ.ಎಲ್​.ರಾಹುಲ್​ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್​ ಆಗುತ್ತಿದ್ದಾರೆ. ಟ್ವಿಟರ್​ನಲ್ಲಿ ನೆಟ್ಟಿಗರು ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ನಿಟ್ಟಿನಲ್ಲಿ ಇಬ್ಬರೂ ಆಟಗಾರರೂ ಸೋಮವಾರ ಕ್ಷಮೆ ಕೇಳಿದ್ದರು. (ಏಜೆನ್ಸೀಸ್)