ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದ ಹಾರ್ದಿಕ್​, ರಾಹುಲ್​ ಆಸ್ಟ್ರೇಲಿಯಾ ಸರಣಿಯಿಂದ ಔಟ್​!

ನವದೆಹಲಿ: ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಮತ್ತು ಕಾಮಪ್ರಚೋದಕ ಹೇಳಿಕೆ ನೀಡಿದ್ದ ಭಾರತೀಯ ಕ್ರಿಕೆಟ್​ ಪಟುಗಳಾದ ಹಾರ್ದಿಕ್​ ಪಾಂಡ್ಯ ಮತ್ತು ಕೆ.ಎಲ್​.ರಾಹುಲ್​ ಅವರನ್ನು ನಿಷೇಧಿಸಲಾಗಿದೆ ಎಂದು ಬಿಸಿಸಿಐನ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಚೇರ್ಮನ್ ವಿನೋದ್​ ರಾಯ್ ತಿಳಿಸಿದ್ದಾರೆ.

ವಿವಾದದ ವಿಚಾರಣೆಗಾಗಿ ಈ ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಭಾಗವಹಿಸುವುದಿಲ್ಲ. ಇದೇ ವಿಷಯವಾಗಿ ಆಟಗಾರರಿಗೆ ಮತ್ತೊಂದು ಶೋಕಾಸ್​ ನೋಟಿಸ್​ ನೀಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಾರ್ದಿಕ್​ ಮತ್ತು ರಾಹುಲ್​ ಅಮಾನತುಗೊಳಿಸುವ ಕುರಿತು ರಾಯ್ ಮಾಡಿದ್ದ ಶಿಫಾರಸಿಗೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಕಾನೂನು ಸಮಿತಿ ಡಯಾನಾ ಎಡಲ್ಜಿ, “ಆಟಗಾರರ ದುರ್ನಡತೆ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳುವವರೆಗೂ ಆಟಗಾರರನ್ನು ಅಮಾನತು ಮಾಡುವುದು ಕಡ್ಡಾಯ. ಈ ಹಿಂದೆ ಸಿಇಒ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಾಗಲೂ ಇದೇ ಕ್ರಮ ಕೈಗೊಳ್ಳಲಾಗಿತ್ತು” ಎಂದಿದ್ದಾರೆ.

ಶೋ ಪ್ರಸಾರವಾದ ಬೆನ್ನಲ್ಲಿಯೇ ಸಿಒಎ, ಹಾರ್ದಿಕ್ ಹಾಗೂ ರಾಹುಲ್​ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 24 ಗಂಟೆಯ ಒಳಗಾಗಿ ವಿವರಣೆ ನೀಡುವಂತೆ ಹೇಳಿತ್ತು. ನೋಟೀಸ್​ಗೆ ಉತ್ತರ ನೀಡಿದ್ದ ಹಾರ್ದಿಕ್, ತಮ್ಮ ವರ್ತನೆಗೆ ಕ್ಷಮೆ ಕೇಳಿದ್ದಲ್ಲದೆ, ಇನ್ನೆಂದೂ ಈ ರೀತಿ ತಪ್ಪು ಆಗುವುದಿಲ್ಲ ಎಂದಿದ್ದರು. ಆದರೆ ಹಾರ್ದಿಕ್​ರ ವಿವರಣೆಯಿಂದ ನನಗೆ ತೃಪ್ತಿಯಾಗಿಲ್ಲ. ಆ ಕಾರಣದಿಂದಾಗಿ ಇಬ್ಬರಿಗೂ ತಲಾ ಎರಡು ಏಕದಿನ ಪಂದ್ಯಗಳ ನಿಷೇಧಕ್ಕೆ ಶಿಫಾರಸು ಮಾಡಿದ್ದೇನೆ. ಈ ನಿರ್ಧಾರಕ್ಕೆ ಡಯಾನಾ ಕೂಡ ಸಹಮತ ವ್ಯಕ್ತಪಡಿಸಿದರೆ, ಅಂತಿಮ ನಿರ್ಧಾರ ಹೊರಬೀಳಲಿದೆ’ ಎಂದು ವಿನೋದ್ ರಾಯ್ ತಿಳಿಸಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *