ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸತತ ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ.
ಸಚಿವರಾಗಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಿಯೂ ಪ್ರಯಾಸದ ಗೆಲುವಿನಲ್ಲಿ ತೃಪ್ತಿಪಡುವಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಪಾಟೀಲ ಮೂರನೇ ಬಾರಿ ಹೆಬ್ಬಾರ ಎದುರು ಪರಾಭವಗೊಂಡಿದ್ದು, ಎರಡನೇ ಬಾರಿ ಶಾಸಕರಾಗುವ ಅವರ ಕನಸು ಭಗ್ನಗೊಂಡಿದೆ.
ಹೆಬ್ಬಾರ ಆಪ್ತರ ಬಗೆಗೆ ಜನರಿಗೆ ಇದ್ದ ಅಸಮಾಧಾನ, ಮೂಲ ಬಿಜೆಪಿಗರ ಅಸಹಕಾರ, ಅಡ್ಡ ಮತದಾನ ಹಾಗೂ ಅಪಪ್ರಚಾರದ ನಡುವೆಯೂ ಗೆಲುವು ಸಾಧಿಸಿರುವುದು ಹೆಬ್ಬಾರ ಅವರ ವಿಶೇಷತೆ. ಹೆಬ್ಬಾರ ಅವರ ಕುರಿತು ಅಸಮಾಧಾನ ಇದ್ದರೂ, ಪಕ್ಷ ನಿಷ್ಠೆ ಹೊಂದಿದ ಬಿಜೆಪಿಗರು ಕೈ ಬಿಡಲಿಲ್ಲ.
ಯಲ್ಲಾಪುರದ ಜನರ ಮತಕ್ಕಿಂತ ಮುಂಡಗೋಡ ಹಾಗೂ ಬನವಾಸಿಯ ಮತಗಳನ್ನು ನೆಚ್ಚಿಕೊಂಡಿದ್ದ ಹೆಬ್ಬಾರ ಗೆಲುವಿಗೆ, ಈ ಬಾರಿ ಯಲ್ಲಾಪುರದ ಮತಗಳೇ ನಿರ್ಣಾಯಕವಾಗಿರುವುದು ವಿಶೇಷವಾಗಿದೆ.
ಹೆಬ್ಬಾರ ಸಚಿವರಾಗಿ ಕ್ಷೇತ್ರದಲ್ಲಿ ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು, ಕಷ್ಟಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಗೆಲುವಿಗೆ ಪೂರಕವಾಗಿದೆ.
2008ರಲ್ಲಿ ಪಾಟೀಲ ಎದುರು ಕಾಂಗ್ರೆಸ್‌ನಿಂದ ಸೋತಿದ್ದ ಹೆಬ್ಬಾರ, 2013ರಲ್ಲಿ 25,000 ಮತಗಳ ಅಂತರದ ಭಾರಿ ಗೆಲುವು ಸಾಧಿಸಿದ್ದರು. 2018ರಲ್ಲಿ ಮತ್ತೊಮ್ಮೆ ಪಾಟೀಲ ಎದುರು 1400 ಮತಗಳ ಅಂತರದಿಂದ ಗೆದ್ದಿದ್ದರರು.
2019ರಲ್ಲಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ 30,000 ಮತಗಳ ಭರ್ಜರಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ.
ಪಾಟೀಲ ಪ್ರಬಲ ಪೈಪೋಟಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್. ಪಾಟೀಲ ಅವರು ಪ್ರಭಾವಿ ಎದುರಾಳಿ ಹೆಬ್ಬಾರ ಅವರಿಗೆ ಪ್ರಬಲ ಪೈಪೋಟಿ ನೀಡಿ ಗಮನ ಸೆಳೆದರು. ಕ್ಷೇತ್ರದಾದ್ಯಂತ ಹೆಬ್ಬಾರ ಅಭಿವೃದ್ಧಿ ಪರ್ವ, ಅಬ್ಬರದ ಪ್ರಚಾರದ ನಡುವೆಯೂ ಪಾಟೀಲ ಉತ್ತಮ ಪೈಪೋಟಿ ನೀಡಿದ್ದು ವಿಶೇಷ. ಯಲ್ಲಾಪುರದ ಗ್ರಾಮೀಣ ಭಾಗಗಳಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡದೆ ಇರುವುದು, ಕೊನೆಯ ಕ್ಷಣದಲ್ಲಿ ಪಾಟೀಲ ಕಾಂಗ್ರೆಸ್ ಸೇರಿದ್ದು, ಕೊನೆಯ ಹಂತದಲ್ಲಿ ಅವರಿಗೆ ಟಿಕೆಟ್ ಘೋಷಣೆಯಾಗಿರುವುದು ಪಾಟೀಲ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸತತ ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಜಯಭೇರಿಗೆ ಕಾರಣರಾದ ದೈವ ದುರ್ಲಭ ಸ್ಟಾರ್ ಪ್ರಚಾರಕ ಕಾರ್ಯಕರ್ತರು, ಮುಖಂಡರು, ಮತದಾರರಿಗೆ ಋಣಿಯಾಗಿದ್ದೇನೆ. ಜನರು ನೀಡಿದ ಈ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಮುಂದಿನ ಐದು ವರ್ಷಗಳಲ್ಲಿ ಆರೋಗ್ಯ, ನೀರಾವರಿ, ಶಿಕ್ಷಣ, ವಸತಿ, ಔದ್ಯೋಗಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ದುಡಿಯುತ್ತೇನೆ.
ಶಿವರಾಮ ಹೆಬ್ಬಾರ, ಶಾಸಕ