ವಾವ್​ ಐಸಿಸಿ ವಾವ್​: ಐಸಿಸಿ ತೀರ್ಪಿನ ವಿರುದ್ಧ ಭಜ್ಜಿ ಆಕ್ರೋಶಕ್ಕೆ ಕಾರಣವೇನು?

ನವದೆಹಲಿ: ಚೆಂಡು ವಿರೂಪಗೊಳಿಸಿದ ವಿವಾದದಲ್ಲಿ ಆಸಿಸ್​​ ಆಟಗಾರನ ವಿರುದ್ಧ ಐಸಿಸಿ ನೀಡಿದ ತೀರ್ಪು ಕುರಿತು ಟೀಂ ಇಂಡಿಯಾದ ಆಫ್​ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಕ್ಯಾಮೆರಾನ್ ಬ್ಯಾನ್ಕ್ರಾಫ್ಟ್ ಪಾತ್ರವಿದ್ದು, ಆತನನ್ನು ನಿಷೇಧಿಸದೆ ಪಂದ್ಯದ ಮೊತ್ತದಲ್ಲಿ ಕೇವಲ 75 ರಷ್ಟು ದಂಡ ವಿಧಿಸಿ ಆಡಲು ಅವಕಾಶ ಕೊಟ್ಟಿರುವ ಐಸಿಸಿ ವಿರುದ್ಧ ಹರ್ಭಜನ್​ ಕೆಂಡಾಮಂಡಲರಾಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಹರ್ಭಜನ್​ ಎಲ್ಲಾ ಸಾಕ್ಷಿಗಳಿದ್ದರೂ ಕ್ಯಾಮೆರಾನ್ ಬ್ಯಾನ್ಕ್ರಾಫ್ಟ್ ಅವರನ್ನು ನಿಷೇಧಿಸದೇ ಐಸಿಸಿ, ಆಸಿಸ್​ ಆಟಗಾರರ ವಿರುದ್ಧ ಮೃದು ಧೋರಣೆ ತೋರಿದೆ. ಆದರೆ, ಈ ಹಿಂದೆ 2001 ಹಾಗೂ 2008 ರಲ್ಲಿ ನಡೆದ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳಿಲ್ಲದಿದ್ದರೂ ನಮ್ಮ 6 ಆಟಗಾರರನ್ನು ಐಸಿಸಿ ನಿಷೇಧಿಸಿದೆ. ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ತೀರ್ಪು ನೀಡುವುದರಿಂದ ಅಪರಾಧಿ ಭಾವನೆ ಕಾಡುವುದಿಲ್ಲವೇ ಎಂದು ಕಿಡಿಕಾರಿದ್ದಾರೆ.

2001 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ ಹರ್ಭಜನ್​ ಸೇರಿದಂತೆ ಸಚಿನ್​, ಸೆಹ್ವಾಗ್​, ಗಂಗೂಲಿ, ಶಿವ ಸುಂದರ್​ ದಾಸ್​ ಹಾಗೂ ದೀಪ್​ ದಾಸ್​ಗುಪ್ತ ಅವರನ್ನು ವಿವಿಧ ಅಪರಾಧದ ಅಡಿಯಲ್ಲಿ ಪಂದ್ಯದಿಂದ ನಿಷೇಧಿಸಲಾಗಿತ್ತು. 2008 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯದಲ್ಲಿ ಜನಾಂಗೀಯ ನಿಂದನೆ ಅಡಿಯಲ್ಲಿ ಹರ್ಭಜನ್​ ಅವರನ್ನು 3 ಪಂದ್ಯದಿಂದ ನಿಷೇಧಿಸಲಾಗಿತ್ತು.

ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್ ವಾನ್ ಕೂಡ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರಕರಣದಲ್ಲಿ ಇಡೀ ತಂಡವನ್ನು ದಂಡಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *