ಶಿವಮೊಗ್ಗ: ಮೈಕ್ರೋ ಫೈನಾನ್ಸ್‌ಗಳು ಜಿಲ್ಲೆಯ ಬಡ ಮಹಿಳೆಯರನ್ನು ಶೋಷಣೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಸಭೆ ಕರೆದು ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್‌ಗಳಿವೆ. ಈ ಪೈಕಿ ಬಹುತೇಕ ಸಂಸ್ಥೆಗಳು ಆರ್‌ಬಿಐನ ನಿಯಮ ಪಾಲಿಸದೆ ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿವೆ. ಬಡ ಮಹಿಳೆಯರಿಗೆ ಸಾಲ ನೀಡಿದ ನಂತರ ಸಾಲ ವಸೂಲಿ ನೆಪದಲ್ಲಿ ಮಹಿಳೆಯರ ಮನೆಗಳಿಗೆ ತೆರಳಿ ಮಾನಸಿಕ ಹಿಂಸೆ ನೀಡುತ್ತಿವೆ. ಸಾಲ ಮರುಪಾವತಿ ಮಾಡುವವರೆಗೂ ಸಂಸ್ಥೆಯ ಸಿಬ್ಬಂದಿ ಸಾಲಗಾರರ ಮನೆಯಲ್ಲೇ ಕುಳಿತು ಕಿರಿಕಿರಿ ಮಾಡುತ್ತಾರೆ ಎಂದು ದೂರಿದರು.
ಆರ್‌ಬಿಐ ನಿಯಮಾನುಸಾರ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ಸಾಲ ವಸೂಲು ಮಾಡಬೇಕು. ಆದರೆ ನಿಯಮ ಮೀರಿ ವರ್ತಿಸುವ ಸಿಬ್ಬಂದಿ ಸಾಲಗಾರರ ಮೇಲೆ ಮನಬಂದಂತೆ ವಾಗ್ದಾಳಿ ನಡೆಸುತ್ತಾರೆ. ಹಗಲು-ರಾತ್ರಿ ಎನ್ನದೇ ಸಾಲ ವಸೂಲಿ ಮಾಡುತ್ತಾರೆ. ಕೂಡಲೇ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾಧಿಕಾರಿ ಮೈಕ್ರೋ ಫೈನಾನ್ಸ್ ಮುಖ್ಯಸ್ಥರ ಸಭೆ ಕರೆದು ಸೂಕ್ತ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.