ಹರಪನಹಳ್ಳಿ: ಪಟ್ಟಣದ ವಾಲ್ಮೀಕಿ ನಗರದ ಶ್ರೀ ಹಾಲಸ್ವಾಮಿಗಳ ಜಾತ್ರೆ ಅಂಗವಾಗಿ ಎರಡು ದಿನ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ಜರುಗಿದವು.

ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಕುಸ್ತಿಪಂದ್ಯಾವಳಿಗೆ ಚಾಲನೆ ನೀಡಿದ್ದು, ಮೊದಲನೇ ದಿನವಾದ ಭಾನುವಾರ 52 ಕುಸ್ತಿ ಪಂದ್ಯ ನಡೆದವು. ಅದರಲ್ಲಿ ವಿಜೇತರಾದ ಕುಸ್ತಿಪಟುಗಳಿಗೆ ವಾಲ್ಮೀಕಿ ನಗರದ ಮೂರು ಓಣಿಯ ಸಮಸ್ತ ದೈವಸ್ಥರು ಹಾಗೂ ಕಮಿಟಿಯವರು ಬಹುಮಾನ ನೀಡಿ ಸನ್ಮಾನಿಸಿದರು. ಸೋಮವಾರ ನಡೆದ ಪಂದ್ಯಾವಳಿಗಳಲ್ಲಿ 5 ಕುಸ್ತಿ ಪಂದ್ಯಗಳು ನಡೆದವು. ಕುಸ್ತಿ ಪಂದ್ಯ ಮುಂದುವರಿದಿದ್ದ ಸಂದರ್ಭದಲ್ಲಿ ರಭಸವಾಗಿ ಮಳೆ ಬಂದಿದ್ದರಿಂದ ಪಂದ್ಯಾವಳಿಗಳನ್ನು ರದ್ದುಪಡಿಸಲಾಯಿತು. ಮರುದಿನವೇ ಪಂದ್ಯ ನಡೆಸುವಂತೆ ರಾಜ್ಯಮತ್ತು ನೆರೆ ರಾಜ್ಯದಿಂದ ಬಂದಿದ್ದ ಕುಸ್ತಿಪಟುಗಳು ಮನವಿ ಮಾಡಿಕೊಂಡರು. ನಾಳೆಯೂ ಮಳೆ ಬಂದರೆ ಸಮಸ್ಯೆ ಆಗುತ್ತದೆ. ಆದ್ದರಿಂದ ಶಾಸಕರ ಬಳಿ ಈ ಬಗ್ಗೆ ಚರ್ಚಿಸಿ ದೀಪಾವಳಿಯ ಹಬ್ಬದಂದು ರದ್ದಾದ ಪದ್ಯಗಳನ್ನು ಆಯೋಜಿಸುವುದಾಗಿ ಸಮಿತಿಯವರು ಹೇಳಿದರು.
ಪದ್ಯಾವಳಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಪರಶುರಾಮಪ್ಪ, ಶಶಿಧರ್ ಪೂಜಾರ್, ಎಚ್.ಕೆ.ಹಾಲೇಶ, ಡಿ.ರೊಕ್ಕಪ್ಪ, ಕೆ.ಪ್ರಕಾಶ ವಕೀಲರು, ಮಂಡಕ್ಕಿ ಸುರೇಶ್, ಪಿ.ನಾಗರಾಜ್, ಮ್ಯಾಕಿ ಸಣ್ಣ ಹಾಲಪ್ಪ, ದ್ಯಾಮಜ್ಜಿ ಹನುಮಂತಪ್ಪ ಇತರರು ಇದ್ದರು.