ಕನ್ನಡ ಜಾಗೃತಿಗೆ ಬೈಕ್ ಏರಿದ ಕನ್ನಡಿಗ

ಹರಪನಹಳ್ಳಿ: ಸಿನಿಮಾ ನಟರನ್ನು ತಮ್ಮ ಜೀವನದ ನಾಯಕರನ್ನಾಗಿ ಕೆಲವರು ಅನುಕರಿಸುತ್ತಾರೆ. ಆದರೆ, ಇಲ್ಲೊಬ್ಬ ವಿಷ್ಣುವರ್ಧನ ಅಭಿಮಾನಿ ಕನ್ನಡ ನಾಡು, ನುಡಿ ರಕ್ಷಣೆಗಾಗಿ ಬೈಕ್ ಸವಾರಿ ಆರಂಭಿಸಿದ್ದಾರೆ.

ರಾಣಿಬೆನ್ನೂರು ತಾಲೂಕು ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ ಅವರೇ ಕನ್ನಡ ಜಾಗೃತಿಗಾಗಿ ಬೈಕ್ ಏರಿದ್ದಾರೆ. ಭುವನೇಶ್ವರಿ, ವಿಷ್ಣು ಭಾವಚಿತ್ರಗಳನ್ನು ಬೈಕ್‌ಗೆ ಸಿಂಗಾರ ಮಾಡಿ, ಕನ್ನಡಪರ ಸಿನಿಮಾದ ಹಾಡುಗಳನ್ನು ಧ್ವನಿವರ್ಧಕಕ್ಕೆ ಅಳವಡಿಸಿದ್ದಾರೆ.

ಅ.27ರಂದು ಚಿತ್ರದುರ್ಗದ ಮುರುಘಾ ಮಠದಿಂದ ಪ್ರವಾಸ ಆರಂಭಿಸಿದ್ದು, ಲಿಂಬಳಗೇರಿ, ಗಾಣಗಟ್ಟೆ, ಉಜ್ಜಿನಿ, ಕೊಟ್ಟೂರು, ಕೂಡ್ಲಿಗಿ, ಮೊರಮದ ಮೂಲಕ ಸೋಮವಾರ ಹರಪನಹಳ್ಳಿಗೆ ಆಗಮಿಸಿದ್ದಾರೆ.

ಇಲ್ಲಿಂದ ಹಂಪಿಗೆ ಹೋಗಿ ನಂತರ ಅ.31ಕ್ಕೆ ಬಳ್ಳಾರಿಗೆ ತೆರಳಲಿದ್ದಾರೆ. ನ.1ರಂದು ರಾಜಧಾನಿ ಬೆಂಗಳೂರಿನ ವಿಧಾನಸೌಧ, ಕನ್ನಡ ಭವನಕ್ಕೆ ಭೇಟಿ ಕೊಡುವ ಉದ್ದೇಶ ಹೊಂದಿದ್ದಾರೆ.

ಕನ್ನಡಿಗನ ಹೋರಾಟಕ್ಕೆ ಕಂಪನಿ 15 ದಿನ ಮುಂಚಿತ ರಜೆ ನೀಡಿದೆ. ಅಲ್ಲಲ್ಲಿ ಬೈಕ್‌ಗೆ ಪೆಟ್ರೊಲ್, ತಿಂಡಿ, ಊಟದ ವ್ಯವಸ್ಥೆಯನ್ನು ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ.

ಕನ್ನಡಪರ ಹಾಡುಗಳ ಪ್ರಚಾರ ಅಷ್ಟೇ ಅಲ್ಲ, ವಿಷ್ಣುವರ್ಧನ ಅವರ ರೀತಿ ಮಿಮಿಕ್ರಿ ಮಾಡುತ್ತಾರೆ. ಈ ಮೂಲಕ ಕನ್ನಡ ಶಾಲೆ ಉಳಿಸಿ, ಕನ್ನಡ ಭಾಷೆ, ನಾಡು ಉಳಿಸುವಂತೆ ಜನರಿಗೆ ಮನವಿ ಮಾಡುವ ಮೂಲಕ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ನಟರನ್ನು ಜೀವನದ ನಾಯಕರನ್ನಾಗಿ ಸ್ವೀಕರಿಸುವುದಷ್ಟೇ ಮುಖ್ಯವಲ್ಲ. ಅವರ ಹೆಸರಿನಲ್ಲಿ ಏನಾದರೂ ಸಾಮಾಜಿಕ ಸೇವೆ ಮಾಡಬೇಕು. ಜನಮಾನಸದಲ್ಲಿ ಉಳಿಸುವ ಕೆಲಸ ಮಾಡುವ ನಾಗಬಸಯ್ಯ ಕಾರ್ಯ ಮಾದರಿ.
ಕುಣಿಗಲ್ ಕೇಶವ್ ವಿಷ್ಣು ಅಭಿಮಾನಿ

ಕನ್ನಡೇತರರಿಗೆ ಭಾಷೆ ಕಲಿಸುತ್ತೇನೆ
ನಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲೂ ಕನ್ನಡೇತರ ಸ್ನೇಹಿತರಿಗೆ ಭಾಷೆ ಕಲಿಸುತ್ತೇನೆ. ಜನರಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಾರ್ಥಕತೆ ತಂದಿದೆ ಎನ್ನುತ್ತಾರೆ ನಾಗಬಸಯ್ಯ ಮಳಲಿಮಠ.