ಹಬ್ಬ ಹರಿದಿನ ಮರೆಯದ ಭಾರತೀಯರು

ಹರಪನಹಳ್ಳಿ: ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳಾಗಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಭಾರತೀಯರು ಹಬ್ಬ ಹರಿದಿನಗಳನ್ನು ಮರೆತಿಲ್ಲ ಎಂದು ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ಹರಪನಹಳ್ಳಿ ತೆಗ್ಗಿನಮಠ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸಂಕ್ರಾಂತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸೂರ್ಯನು ಮಕರರಾಶಿ ಪ್ರವೇಶಿಸಿದಾಗ, ಮಕರ ಸಂಕ್ರಾಂತಿ ಎನಿಸುತ್ತದೆ. ಉತ್ತರಾಯಣದಲ್ಲಿ ಸೂರ್ಯ ದಿಕ್ಕನ್ನು ಬದಲಿಸುತ್ತಾನೆ. ಇದರಿಂದ ಭೂಮಿಯ ಉತ್ತರಾರ್ಧ ಗೋಳದಲ್ಲಿ ಚಳಿ, ಬೆಚ್ಚನೆಯ ವಾತಾವರಣ ಉಂಟಾಗುತ್ತದೆ. ಇದನ್ನೇ ಮಕರ ಸಂಕ್ರಾಂತಿಯನ್ನಾಗಿ ಆಚರಿಸುವ ಭಾರತೀಯರು ಹಬ್ಬ ಹರಿದಿನಕ್ಕೆ ವಿಶೇಷ ಅರ್ಥ ಕಲ್ಪಿಸಿದ್ದಾರೆ ಎಂದರು.

ಹಲವು ವರ್ಷಗಳಿಂದ ತುಂಗಭದ್ರಾ ನದಿಪಾತ್ರದಲ್ಲಿ ಸಾಮೂಹಿಕ ಸಂಕ್ರಾಂತಿ ನಡೆಯುತ್ತಾ ಬಂದಿದೆ. ಧೂಳೆಹೊಳೆ ಗ್ರಾಮಸ್ಥರು ಮತ್ತು ತೆಗ್ಗಿನಮಠದ ನಡುವೆ ಅವಿನಾಭಾವ ಸಂಬಂಧ ಇದ್ದು, ಲಿಂಗೈಕ್ಯ ಶ್ರೀ ಚಂದ್ರಮೌಳೀಶ್ವರ ಸ್ವಾಮೀಜಿ ಆರಂಭಿಸಿದ್ದ ಸಾಮೂಹಿಕ ಸಂಕ್ರಾಂತಿ ಆಚರಣೆಯನ್ನು ಪ್ರತಿವರ್ಷವೂ ಆಯೋಜಿಸಲಾಗುತ್ತಿದೆ ಎಂದು ಸ್ಮರಿಸಿದರು.

ಗ್ರಾಮದ ಶ್ರೀ ಚಂದ್ರಮೌಳೀಶ್ವರರ ಸಮುದಾಯ ಭವನದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ಸಂಸ್ಥೆಯ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರಯ್ಯ ಅವರು 15 ಲಕ್ಷ ರೂ. ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆ 5 ಲಕ್ಷ ರೂ. ಮೊತ್ತದ ಚೆಕ್‌ನ್ನು ಗ್ರಾಮದ ಮುಖಂಡರಾದ ನಾಗನಗೌಡ್ರು ಅವರಿಗೆ ನಮ್ಮ ಸಮ್ಮುಖದಲ್ಲಿ ವಿತರಿಸಿದರು ಎಂದರು.

ಸಂಕ್ರಾಂತಿ ಆಚರಣೆಗೆ ಆಗಮಿಸಿದ್ದ ಮಠದ ಭಕ್ತರು, ಗ್ರಾಮಸ್ಥರಿಗೆ ಎಳ್ಳು ಬೆಲ್ಲ ವಿತರಿಸಲಾಯಿತು. ಹರಿಹರ ಶಾಸಕ ಎಸ್.ರಾಮಪ್ಪ, ಎನ್.ಜಿ.ನಾಗನಗೌಡ್ರು, ಟಿ.ಎಂ.ಚಂದ್ರಶೇಖರಯ್ಯ ಹಾಗೂ ಇತರರಿದ್ದರು.