ಪ್ರಾಣ ಕೊಟ್ಟಾದರೂ ಉಪವಿಭಾಗ ಉಳಿಸುತ್ತೇವೆ

ಹರಪನಹಳ್ಳಿ: ಉಪವಿಭಾಗ ಸ್ಥಳಾಂತರ ಮಾಡಿದರೆ ನಾನು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧನಿದ್ದೇನೆ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಹಿಂದೆ ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಪಡೆಯುವುದಕ್ಕಾಗಿ ನಾನು ದಾವಣಗೆರೆ ಡಿಸಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ದೆ. ಈಗ ಉಪವಿಭಾಗ ಬದಲಾವಣೆ ಮಾಡಿದರೆ ಪ್ರಾಣಕೊಟ್ಟಾದರೂ ಅದನ್ನು ಉಳಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದರು.

ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಇಚ್ಛಾಶಕ್ತಿಯಿಂದ ತಾಲೂಕು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆ ಮಾಡಲಾಗಿದೆ. ಈ ಸಂಭ್ರಮದಲ್ಲಿದ್ದ ಜನತೆಗೆ ಎಸಿ ಕಚೇರಿ ಸ್ಥಳಾಂತರ ಸಿಡಿಲು ಬಡಿದಂತಾಗಿದೆ ಎಂದು ತಿಳಿಸಿದರು.

ಇದನ್ನು ಖಂಡಿಸಿ ತಾಲೂಕಿನ ಜನತೆ ಮತ್ತೊಮ್ಮೆ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿದೆ. ನಾನು ಸಹ ಹೋರಾಟಕ್ಕೆ ಸಿದ್ಧನಿದ್ದೇನೆ ಎಂದರು.