ಹರಪನಹಳ್ಳೀಲಿ ಧರೆಗುರುಳಿದ ಮರಗಳು

ಹರಪನಹಳ್ಳಿ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆ ಸುರಿದು ವಿವಿಧೆಡೆ ಮರಗಳು ನೆಲಕ್ಕುರುಳಿವೆ. ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಪಟ್ಟಣದ ಆಚಾರ್ಯ ಬಡಾವಣೆಯ ಬಿಜೆಪಿ ಕಚೇರಿ ಬಳಿ ಮರ ಅಂಗಡಿ ಮೇಲೆ ಬಿದ್ದು ಮಡಿವಾಳ ರೇವಮ್ಮ ಗಾಯಗೊಂಡಿದ್ದಾರೆ. ಕನ್ನನಾಯ್ಕನಹಳ್ಳಿ, ನಿಚ್ಚವ್ವನಹಳ್ಳಿಯಲ್ಲಿ ಮನೆಗಳು ಹಾನಿಗೀಡಾಗಿವೆ. ಎರಡೆತ್ತಿನಹಳ್ಳಿ, ಕಾಯಕದಹಳ್ಳಿ, ದಡಿಗಾರನಹಳ್ಳಿ, ಬೆಣ್ಣಿಹಳ್ಳಿಯಲ್ಲಿ ವಿದ್ಯುತ್ ಕಂಬಗಳು ಉರುಳಿವೆ.

ತಾಪಂ ಕಚೇರಿ ಆವರಣದಲ್ಲಿದ್ದ ದೊಡ್ಡ ಮರ ಉರುಳಿ ಕಾರು ಜಖಂಗೊಂಡಿದೆ. ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣ, ಐಬಿ ಸರ್ಕಲ್, ಎಸ್‌ಯುಜೆಎಂ ಕಾಲೇಜು ರಸ್ತೆ, 10ನೇ ವಾರ್ಡ್ ಬಡಾವಣೆ, ತಾಪಂ ಹಾಗೂ ಅರಣ್ಯ ಇಲಾಖೆ ಮುಂಭಾಗದ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳು ಮುರಿದು ಬಿದ್ದು, ಕೆಲ ನಿಮಿಷ ಸಂಚಾರ ಅಸ್ತವ್ಯಸ್ತವಾಗಿತ್ತು. ಪುರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ಮರಗಳನ್ನು ತೆರವುಗೊಳಿಸಿದರು. ಚರ್ಚ್ ಪಕ್ಕದ ಬೈಪಾಸ್ ರಸ್ತೆ, ತೆಗ್ಗಿನಮಠ ಮುಂಭಾಗದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ನುಗ್ಗಿತ್ತು.

ಬಾಗಳಿ, ನಂದಿಬೇವೂರು, ಕೂಲಹಳ್ಳಿ, ನಂದಿಬೇವೂರು ತಾಂಡಾ, ನಿಚ್ವವ್ವನಹಳ್ಳಿಯಲ್ಲಿ ರಬಸದ ಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಯಾಗಿದೆ. 20 ನಿಮಿಷಕ್ಕೂ ಹೆಚ್ಚು ಸಮಯ ಸುರಿದ ಮಳೆಗೆ ವಿವಿಧ ಮನೆಗಳ ಚಾವಣೆ ತಗಡುಗಳು ಕಿತ್ತುಹೋಗಿವೆ. ಕೆಲ ಮನೆಗಳ ಗೋಡೆಗಳು ಕುಸಿದಿವೆ. ಉಚ್ಚಂಗಿದುರ್ಗ, ಅರಸೀಕೆರೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದೆ. ಗುಡುಗು, ಮಿಂಚು, ಸಿಡಿಲಿನ ಅರ್ಭಟ ಜೋರಾಗಿತ್ತು.

ಮಳೆ-ಗಾಳಿಗೆ ಎಲ್ಲೆಂದರಲ್ಲಿ ವಿದ್ಯುತ್ ತಂತಿ ಕಿತ್ತು ಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಲು 4 ತಾಸು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ರಾತ್ರಿಯಿಡೀ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಾಧ್ಯವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ ಎಂದು ಬೆಸ್ಕಾಂ ಎಇಇ ಭೀಮಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *