ವರುಣನ ಕೃಪೆಗೆ ಹರಪನಹಳ್ಳಿಯಲ್ಲಿ ಗುರ್ಜಿ ಹೊತ್ತ ಬಾಲಕರು

ವಿಶ್ವನಾಥ ಡಿ. ಹರಪನಹಳ್ಳಿ
ಭೂಮಿ ಹದ ಮಾಡಿಕೊಂಡು ಮಳೆಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ ರೈತ ಕುಟುಂಬಗಳು ಇದೀಗ ದೇವರ ಮೊರೆ ಹೋಗಿವೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಜಮೀನಿನಲ್ಲಿ ಕಸ, ಕಳೆ, ಕಲ್ಲು ಆರಿಸಿ ಸ್ವಚ್ಛ ಮಾಡಿದ ರೈತರು, ಮಣ್ಣಿನ ಕಸುವು ಹೆಚ್ಚಿಸಲು ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಿಂದ ಫಲವತ್ತಾದ ಮಣ್ಣು ಖರೀದಿಸಿ ಜಮೀನಿಗೆ ಹಾಕಿದ್ದಾರೆ.

ಬೇಸಿಗೆಯಲ್ಲಿ ಬೆವರಿಳಿಸಿ ರಂಟೆ ಹೊಡೆದು ಭೂಮಿ ಹದಗೊಳಿಸಿದ್ದಾರೆ. ಆದರೆ, ಮಳೆರಾಯ ಕರುಣೆ ತೋರುತ್ತಿಲ್ಲ. ಹೀಗಾಗಿ ಪಟ್ಟಣದ ಗುಡೆಕೋಟೆ ಕೇರಿ ರೈತ ಕುಟುಂಬಗಳು ದೇವರ ಮೊರೆ ಹೋಗಿವೆ.

ಕೇರಿಯ ಹುಡುಗರು ನಾಲ್ಕು ದಿನಗಳಿಂದ ಗುರ್ಜಿ ಹೊತ್ತು ವರುಣನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಹಲಗೆ ಮೇಲೆ ಬೆನಕನನ್ನು ಇಟ್ಟು ಕುಂಕುಮ, ಭಂಡಾರ ಬಳಿದು ಊದು ಬತ್ತಿ ಹಚ್ಚಿ ಪೂಜಿಸುತ್ತಿದ್ದಾರೆ. ಅದನ್ನು ಬಾಲಕನೊಬ್ಬನ ತಲೆ ಮೇಲೆ ಹೊರಿಸಿಕೊಂಡು ಮನೆ ಮನೆ ತಿರುಗಾಟ ಆರಂಭಿಸಿದ್ದಾರೆ.

ಪೂಜಾರಗೇರಿ, ನಡುವಿನಕೇರಿ, ಗುಡೆಕೋಟೆ ಕೇರಿ, ಉಪ್ಪಾರಗೇರಿ, ಪೂಜಾರಗೇರಿ, ಸಂಡೂರಗೇರಿ ಸೇರಿ ವಿವಿಧೆಡೆಯ ಮನೆಗಳ ಮುಂದೆ ನಿಂತು ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ-ಕೊಳ್ಳ ತಿರುಗಾಡಿ ಬಂದೆ, ಬಾ ಮಳೆಯೇ, ಮಳೆಯೇ. ಕಾಡು ಮಳೆಯೋ, ಕಪ್ಪತ್ತು ಮಳೆಯೋ ಸುರಿ ಸುರಿಯೋ ಮಳೆರಾಯ. ಹುಯ್ಯ ಹುಯ್ಯ ಮಳೆರಾಯ ಎಂದು ಹಾಡುವ ಮೂಲಕ ಜನರಿಂದ ಧಾನ್ಯ ಸಂಗ್ರಹಿಸುತ್ತಿದ್ದಾರೆ.

ಬಾಲಕನ ಪಾದ ಮತ್ತು ತಲೆಗೆ ನೀರೆರೆದು ಊದುಬತ್ತಿ ಬೆಳಗಿ, ಕೈ ಮುಗಿದು ಪೂಜಿಸುವ ಮೂಲಕ ಧಾನ್ಯ ಕೊಟ್ಟು ಮುಂದಕ್ಕೆ ಕಳಿಸುತ್ತಾರೆ. ಹೀಗೆ ಕೇರಿಯ ಎಲ್ಲ ಮನೆಗಳಿಂದ ನೀಡುವ ಜೋಳ, ಅಕ್ಕಿ ಮತ್ತಿತರ ಆಹಾರ ಧಾನ್ಯಗಳನ್ನು ಒಂದೆಡೆ ಸಂಗ್ರಹಿಸುತ್ತಾರೆ. 11ನೇ ದಿನಕ್ಕೆ ಊರಾಚೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರಸಾದ ತಯಾರಿಸಿ ಎಡೆ ಸಮರ್ಪಿಸುವ ಮೂಲಕ ಭೂಮಿ ತಣಿಸುವಂತೆ ವರುಣನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಆಗ ಮಳೆ ಆಗಮನವಾಗುವ ನಂಬಿಕೆ ರೈತಾಪಿ ಕುಟುಂಬಗಳಲ್ಲಿದೆ.

ಮಳೆಗಾಗಿ ಪೂಜಿಸುವ ಈ ಸಂಪ್ರದಾಯ ಪುರಾತನ ಕಾಲದಿಂದಲೂ ಆಚರಣೆಯಲ್ಲಿದೆ. ಎಣ್ಣಿಲ್ಲ, ಬೆಣ್ಣೆ ಇಲ್ಲ, ನೀರು ಇಲ್ಲ ಎಂದು ಹಾಡುವಾಗ ದೇವರ ಮನಸ್ಸು ಕರಗಿ, ಮಳೆ ಸುರಿಯುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ.
ಮಂಜುನಾಥ ಉಪ್ಪಾರಗೇರಿ ನಿವಾಸಿ

Leave a Reply

Your email address will not be published. Required fields are marked *