ಚನ್ನವೀರಸ್ವಾಮಿ ಜ್ಯೋತಿಯಾತ್ರೆಗೆ ಚಾಲನೆ

 ಹರಪನಹಳ್ಳಿ: ಜ್ಞಾನದ ಬೆಳಕು ಪಸರಿಸಲು ಬಯಲುಸೀಮೆಯಿಂದ ಮಲೆನಾಡಿಗೆ ಚನ್ನವೀರಸ್ವಾಮಿ ಜ್ಯೋತಿಯಾತ್ರೆ ಸಾಗುತ್ತಿದೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ನೀಲಗುಂದ ಗ್ರಾಮದ ಗುಡ್ಡದ ವಿರಕ್ತ ಮಠದಿಂದ ಅಕ್ಕಿ ಅಲೂರು ಮಠಕ್ಕೆ ಚ್ನವೀರಸ್ವಾಮಿ ಜನ್ಮ ಶತಮಾನೋತ್ಸವ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಚನ್ನವೀರಸ್ವಾಮಿಗಳು ಮೂಲತಃ ನೀಲಗುಂದ ಗ್ರಾಮದವರು. ಅಕ್ಕಿ ಅಲೂರು ಮಠಕ್ಕೆ ಪಟ್ಟಾಭಿಷೇಕ ಮಾಡಿ ಕಳೆದ ಎಂಟು ವರ್ಷಗಳ ಹಿಂದೆ ಸ್ವರ್ಗ ವಾಸಿಗಳಾಗಿದ್ದಾರೆ. ಇವರ ಪಟ್ಟದ ಮಠದಲ್ಲಿ ಜನ್ಮ ಶತಮಾನೋತ್ಸವವನ್ನು ನ.13ರಿಂದ 15ರವರೆಗೆ ಜ್ಞಾನದ ಜ್ಯೋತಿಯಾತ್ರೆ ರಾಜ್ಯದ ಕೆಲವು ಗ್ರಾಮಗಳಿಗೆ ತೆರಳಲಿದೆ ಎಂದು ಹೇಳಿದರು.

ತಾಲೂಕಿನ ಇಟ್ಟಿಗುಡಿ, ಕುಂಚೂರು, ಕಣಿವಿ, ಸಿದ್ದಾಪುರ, ಲಿಂಗನಾಯ್ಕನಹಳ್ಳಿ ಮಾರ್ಗವಾಗಿ ಹರನಗಿರಿ, ಗಂಗಾಪುರ, ರಾಣೆಬೆನ್ನೂರಿನ ಕೊಟ್ಟೂರೇಶ್ವರ ಮಠದಲ್ಲಿ ವಸತಿಗೊಂಡು ನ.14ರಂದು ಕಾಕವಾಡ ಮಾರ್ಗವಾಗಿ ಮಾಳಗೊಂಡನಗೊಪ್ಪಕ್ಕೆ ತೆರಳಲಿದೆ. ನ.15ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಮಠದಲ್ಲಿ ಶತಮಾನೋತ್ಸವ ಸಮಾರಂಭದ ಮೂಲಕ ಮುಕ್ತಾಯಗೊಳ್ಳಲಿದೆ ಎಂದರು.

101ಕುಂಭ ಕಳಸದೊಂದಿಗೆ ಹಾಗೂ ಸಕಲ ವಾದ್ಯಗಳ ಮೆರವಣಿಗೆ ರಥಯಾತ್ರೆಗೆ ಮೆರುಗು ನೀಡಿದವು. ಲಿಂಗನಾಯಕನಹಳ್ಳಿ ಚನ್ನವೀರಸ್ವಾಮಿಗಳು, ಅಕ್ಕಿ ಆಲೂರಿನ ಶಿವಬಸವ ಸ್ವಾಮಿ, ನವಲಗುಂದ ನಾಗಲಿಂಗ ಶ್ರೀ ಗುರುಸಿದ್ದಸ್ವಾಮಿಗಳ ನೇತೃತ್ವದಲ್ಲಿ ರಥಯಾತ್ರೆ ಆರಂಭಗೊಂಡಿತು.

ಮುಖಂಡರಾದ ಬೇಲೂರು ಅಂಜಪ್ಪ, ಮಡಿವಾಳಪ್ಪ, ನಾಗರಾಜ ಪಾಟೀಲ, ಎಚ್.ಎಂ.ಶಿವಾನಂದಸ್ವಾಮಿ, ಕೆ.ಬಿ.ಮಂಜುನಾಥ, ಪಾಟೀಲ ಬೆಟ್ಟನಗೌಡ, ಗೌರಿಶಂಕರ, ಎಸ್.ಚಂದ್ರಪ್ಪ, ವಿಜಯಪ್ಪ, ವಿ.ಬಿ.ಪಾಟೀಲ್, ಸಿದ್ದಲಿಂಗಪ್ಪ, ಗ್ರಾಮಸ್ಥರು ಭಾಗವಹಿಸಿದ್ದರು.