ಅಗಲಿದ ರವೀಂದ್ರಗೆ ಅಂತಿಮ ನಮನ

ಹರಪನಹಳ್ಳಿ: ಮಾಜಿ ಶಾಸಕ ಎಂ.ಪಿ. ರವೀಂದ್ರ ಪಾರ್ಥೀವ ಶರೀರವನ್ನು ಎಡಿಬಿ ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಎಡಿಬಿ ಕಾಲೇಜಿನಿಂದ ಆರಂಭವಾಗಿ ವಾಲ್ಮೀಕಿ ನಗರ, ಕೊಟ್ಟೂರು ವೃತ್ತ, ಮೇಗಳಪೇಟೆ, ಬಸ್‌ನಿಲ್ದಾಣ, ಹೊಸಪೇಟೆ ರಸ್ತೆ, ಐಬಿ ವೃತ್ತದ ಮೂಲಕ ಸಾಗಿತು. ರಾತ್ರಿ 10.30ಕ್ಕೆ ಬೀಳ್ಕೊಡಲಾಯಿತು.

ರವೀಂದ್ರ ಅವರ ಪಾರ್ಥೀವ ಶರೀರದ ದರ್ಶನಕ್ಕೆ ವಿವಿಧ ಮಠಾಧೀಶರು, ಗಣ್ಯರು, ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದರು. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಾಯಕನ ಅಗಲಿಕೆಗೆ ಕಣ್ಣೀರು ಹಾಕಿದರು. ಹೂವಿನ ಹಾರ ಅರ್ಪಿಸಿ, ಆತ್ಮಕ್ಕೆ ಚಿರಶಾಂತಿ ಕೋರಿದರು. ಅವರ ಸಾಧನೆ ಮೆಲುಕು ಹಾಕಿದರು. ಸಾವಿರಾರು ಜನ ಸ್ವಂತ ವಾಹನಗಳಲ್ಲಿ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ತೆಗ್ಗಿನ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ, ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಪುರಸಭೆ ಅಧ್ಯಕ್ಷ ಎಚ್.ಕೆ. ಹಾಲೇಶ್, ತಹಸೀಲ್ದಾರ್ ಶಿವಶಂಕರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಪ್ರಕಾಶ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಿ.ಎಲ್. ಪೋಮ್ಯನಾಯ್ಕ ಮತ್ತಿತರರು ಅಂತಿಮ ದರ್ಶನ ಪಡೆದರು.