ಹರಪನಹಳ್ಳಿ: ಪಟ್ಟಣದ ಕೊಟ್ಟೂರು ರಸ್ತೆಯ ವೃತ್ತದಲ್ಲಿ ನಿರ್ಮಾಣ ಹಂತದಲ್ಲಿದ್ದ, ಗೋಪುರ ಆಕೃತಿಯ ಕಟ್ಟಡದ ಸುತ್ತಲಿನ ರಕ್ಷಣಾ ಗೋಡೆಯನ್ನು ಶುಕ್ರವಾರ ತೆರವುಗೊಳಿಸಲಾಯಿತು.
ಪುರಸಭೆಯಲ್ಲಿ 2017-18ರ ಅವಧಿಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಮಹನೀಯರ ಹೆಸರಿನೊಂದಿಗೆ ಗೋಪುರ ಆಕೃತಿಯ ಕಟ್ಟಡ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು.
ಇನ್ನೇನು ಕಾಮಗಾರಿ ಮುಗಿಯುವ ಹಂತ ತಲುಪುತ್ತಿರುವಾಗಲೇ ಸ್ಥಳದ ಕೊರತೆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಜೆಸಿಬಿಯಿಂದ ವೃತ್ತದ ರಕ್ಷಣಾ ಗೋಡೆ ತೆರವುಗೊಳಿಸಿದರು.
ಉಪ ವಿಭಾಗಾಧಿಕಾರಿ ವಿ.ಕೆ.ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಕಳೆದೆರಡು ತಿಂಗಳಿಂದ ಸಾರ್ವಜನಿಕರು ಮತ್ತು ಪುರಸಭೆ ಚುನಾಯಿತ ಸದಸ್ಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ಗಮನಕ್ಕೆ ತಂದು ಕಾರ್ಯಾಚರಣೆ ನಡೆಸಲಾಯಿತು. ಉಳಿದಂತೆ ಹರಿಹರ ವೃತ್ತದ ಬಳಿ ರಾಜ ಸೋಮಶೇಖರನಾಯ್ಕ ವೃತ್ತದ ಕಟ್ಟಡದ ಸುತ್ತಲಿನ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದರು.
ಸಾಧಕ, ಬಾಧಕಗಳನ್ನು ಗಮನಿಸಿ ಕಟ್ಟಡ ನಿರ್ಮಾಣ ಮಾಡಬೇಕು. ಅವೈಜ್ಞಾನಿಕವಾಗಿ ಮಾಡುವುದರಿಂದ ಸರ್ಕಾರದ ಹಣ ಪೋಲಾಗುತ್ತದೆ ಎಂದು ಸಾರ್ವಜನಿಕರು ದೂರಿದರು.
ಸಾರ್ವಜನಿಕ ಹಣವನ್ನು ಮನಸ್ಸಿಗೆ ಬಂದಂತೆ ವೆಚ್ಚ ಮಾಡುತ್ತಾರೆ. ಜನರಿಗೆ ಅಧಿಕಾರಿಗಳೇ ಉತ್ತರಿಸಲಿ ಎನ್ನುತ್ತಾರೆ ಸ್ಥಳೀಯರಾದ ಎಚ್.ವೆಂಕಟೇಶ್ ಪಟ್ನಾಮದ್.