ವಿಷಪೂರಿತ ಬಳ್ಳಿ ತಿಂದು 20 ಕುರಿ

ಹರಪನಹಳ್ಳಿ: ಪಟ್ಟಣದ ಮೈಲಾರ ಲಿಂಗೇಶ್ವರ ದೇವಸ್ಥಾನ ಬಳಿಯ ಜಮೀನಿನಲ್ಲಿ ವಿಷಪೂರಿತ ಸವತೆ ಬಳ್ಳಿ ತಿಂದು 20 ಕುರಿಗಳು ಮೃತಪಟ್ಟು, 25ಕ್ಕೂ ಅಧಿಕ ಅಸ್ವಸ್ಥಗೊಂಡಿವೆ.

ಉಪ್ಪಾರಗೇರಿಯ ದಾನೇರ ಚಂದ್ರಪ್ಪ, ಗಾಟಿನ ಸಣ್ಣಪ್ಪ, ಕಾವಿ ಗೋಣೆಪ್ಪ, ಮಜ್ಜಿಗೇರಿ ನಾಗರಾಜ, ಹರವಿ ಬಸಪ್ಪ, ಕಂಚಿಕೇರಿ ನೀಲಪ್ಪ ಎಂಬುವರಿಗೆ ಕುರಿಗಳು ಸೇರಿವೆ.

ಜಮೀನಿನಲ್ಲಿ ಸವತೆ ಬಳ್ಳಿಗೆ ಈಚೆಗೆ ಔಷಧ ಸಿಂಪಡಿಸಲಾಗಿತ್ತು. ಬೆಳೆ ಕಟಾವು ಮಾಡಿದ ನಂತರ ಅಂದಾಜು 600 ಕುರಿಗಳು ಮೇಯಲು ಹೋಗಿದ್ದವು. ಸವತೆ ಬಳ್ಳಿ ಸೇವಿಸಿದ 20 ಕುರಿಗಳು ಅಲ್ಲಲ್ಲಿ ಮೃತಪಟ್ಟಿವೆ. ಉಳಿದ 20-30 ಕುರಿಗಳು ತೀವ್ರ ಅಸ್ವಸ್ಥಗೊಂಡಿವೆ.

ಮರಣೋತ್ತರ ಪರೀಕ್ಷೆ ನಡೆಸಿದ ಪಶು ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ ಮಾತನಾಡಿ, ವಿಷಕಾರಿ ಬಳ್ಳಿ ತಿಂದಿದ್ದೇ ಕುರಿಗಳ ಸಾವಿಗೆ ಕಾರಣ. ಮಾಲೀಕರಿಗೆ ಕಾನೂನಿನ ಅನ್ವಯ ಸೂಕ್ತ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಸ್ಥಳಕ್ಕೆ ಪುರಸಭೆ ಸದಸ್ಯರಾದ ಬೂದಿ ನವೀನ್, ನಾಗರಾಜ್ ಇತರರು ಭೇಟಿ ನೀಡಿದರು.