3 ತಿಂಗಳ ವೇತನ ಪಾವತಿಗೆ ಒತ್ತಾಯ

ಹರಪನಹಳ್ಳಿ: ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಶಿಕ್ಷಕರು ಶನಿವಾರ ಪ್ರತಿಭಟನೆ ನಡೆಸಿದರು.

ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಸಂಘಗಳ ನೇತೃತ್ವದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಜಮಾಯಿಸಿದ ಶಿಕ್ಷಕರು, ತಕ್ಷಣ ಸಂಕಷ್ಟದಲ್ಲಿರುವ ಎಲ್ಲ ಶಿಕ್ಷಕರಿಂದ ಬಾಕಿ ಇರುವ ಸಂಬಳ ಪಾವತಿ ಮಾಡುವಂತೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಸಂಗಪ್ಪನವರ ಬಸವರಾಜ್ ಮಾತನಾಡಿ, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳ ವೇತನ ಪಾವತಿ ಆಗಿಲ್ಲ. ಹೀಗಾಗಿ ಅನೇಕ ಶಿಕ್ಷಕರ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ತಿಳಿಸಿದರು.

ದಿನ ಬಳಕೆ ವಸ್ತುಗಳ ಖರೀದಿ, ವಿವಿಧ ಬಿಲ್ ಪಾವತಿಗಳು ಸಕಾಲಕ್ಕೆ ಸಾಧ್ಯವಾಗದೇ ಕೈಗಡ ಸಾಲದ ಮೊರೆ ಹೋಗಿದ್ದಾರೆ. ಶಿಕ್ಷಕರ ಸಮಸ್ಯೆ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ವೇತನ ಪಾವತಿಸಬೇಕೆಂದು ಒತ್ತಾಯಿಸಿದರು.