ಹರಪನಹಳ್ಳೀಲಿ ಶಾಶ್ವತ ಕುಡಿವ ನೀರಿಗಾಗಿ ರೈತರ ಸಭೆ

ಹರಪನಹಳ್ಳಿ: ತಾಲೂಕಿನ ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗೆ ಶಾಶ್ವತ ಕುಡಿವ ನೀರಿಗೆ ಒತ್ತಾಯಿಸಿ ಹೋರಾಟ ರೂಪಿಸಲು ಸಿದ್ಧತೆ ನಡೆಯುತ್ತಿದೆ ಎಂದು ತರಳಬಾಳು ಹುಣ್ಣಿಮೆ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರಬೋಸ್ ತಿಳಿಸಿದರು.

ತಾಲೂಕಿನ ಚಟ್ನಿಹಳ್ಳಿಯಲ್ಲಿ ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಅರಸೀಕೆರೆ ಹೋಬಳಿಯ ಏಳು ಗ್ರಾಮ ಪಂಚಾಯಿತಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಬೇಸಿಗೆ ಶುರುವಾಗುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಮುಂಜಾಗ್ರತೆವಹಿಸಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

22 ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥಗೌಡ ಮಾತಾನಾಡಿ, ರೈತರು ಜಾತಿ, ಮತ, ಪಕ್ಷಭೇದ ಮಾಡದೇ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.

ಸುದೀರ್ಘ ಚರ್ಚೆ ಬಳಿಕ ಮತ್ತೊಮ್ಮೆ ಪೂರ್ವಭಾವಿ ಸಭೆ ಆಯೋಜಿಸಿ ದಿನಾಂಕ ನಿಗಧಿಮಾಡಲು ತೀರ್ಮಾನಿಸಿದರು.

ಹರಪನಹಳ್ಳಿ ತಾಲೂಕಿನ ಚಟ್ನಿಹಳ್ಳಿ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ ರೂಪಿಸಲು ಪೂರ್ವಸಿದ್ಧತಾ ಸಭೆ ನಡೆಯಿತು.