ಹರಪನಹಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಹರಪನಹಳ್ಳಿ: ದೇಶ ವ್ಯಾಪಿ ಬಂದ್‌ಗೆ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸಿನಿಮಾ ಮಂದಿರ ರಸ್ತೆ, ಬಣಗಾರ ಪೇಟೆ ರಸ್ತೆ, ಪ್ರವಾಸಿ ಮಂದಿರ ವೃತ್ತ, ಪುರಸಭೆ ಸಮೀಪ ರಸ್ತೆಗಳಲ್ಲಿ ಜನದಟ್ಟಣೆ ಇಳಿಮುಖವಾಗಿತ್ತು.

ಬೆಳಗ್ಗೆ 10ರವರೆಗೆ ಸಂಚಾರ ನಡೆಸಿದ ಕೆಎಸ್ಸಾರ್ಟಿಸಿ ಬಸ್‌ಗಳು ನಂತರ ಡಿಪೋದತ್ತ ತೆರಳಿದವು. ಸಂಜೆವರೆಗೂ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್‌ಗಳು ಊರ ಹೊರಗೆ ಸಂಚಾರ ನಡೆಸಿದವು. ಆಟೋ, ಮಿನಿಬಸ್, ತ್ರಿಚಕ್ರ ವಾಹನಗಳಲ್ಲಿ ಪ್ರಯಾಣಿಕರು ಸಂಚರಿಸಿದರು.

ದೂರದ ಊರುಗಳಿಗೆ ಹೋಗುವವರು ಪರದಾಡಿದರು. ಸಿಂಡಿಕೇಟ್ ಬ್ಯಾಂಕ್ ಬಂದ್ ಮಾಡಿದ್ದಕ್ಕೆ ಗ್ರಾಹಕರು ಅಕ್ರೋಶ ವ್ಯಕ್ತಪಡಿಸಿದರು. ಎಸ್‌ಬಿಐನಲ್ಲಿ ವಹಿವಾಟು ನಡೆಯಿತು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸೇವೆ ನೀಡಿದವು. ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಐಬಿ ವೃತ್ತದಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇಜಾರಿ ಶಿರಸಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಎರಡು ತಾಸು ರಸ್ತೆತಡೆ ನಡೆಸಿದರು.

ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ಎಐಯುಟಿಸಿ, ಸಿಐಟಿಯು, ಎಐಸಿಸಿಟಿಯು, ಐಎನ್‌ಟಿಯುಸಿ, ಆಶಾ ಕಾರ್ಯಕರ್ತೆಯರು, ಅಡುಗೆ ತಯಾರಕರು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕಿಯರು, ವಿದ್ಯಾರ್ಥಿ ಸಂಘಟನೆಗಳು, ಕೆಎಸ್ಸಾರ್ಟಿಸಿ ಸಂಘಟನೆ ಸೇರಿ 10ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದೂಡಿದ ಕೆಡಿಪಿ ಸಭೆ: ಮೊದಲೇ ನಿಗದಿಯಾಗಿದ್ದ ತಾಪಂ ಕೆಡಿಪಿ ಸಭೆ ಬೆಳಗ್ಗೆ 11ಕ್ಕೆ ಶುರುವಾಯಿತು. ಸಭಾಂಗಣ ಒಳ ಪ್ರವೇಶಿಸಿದ ಪ್ರತಿಭಟನಾಕಾರರು ಸಭೆ ನಡೆಸದಂತೆ ಪಟ್ಟು ಹಿಡಿದರು. ಅಧ್ಯಕ್ಷೆ ಅನ್ನಪೂರ್ಣಮ್ಮ ಸಭೆ ರದ್ದುಗೊಳಿಸಿ, ಜ. 11ಕ್ಕೆ ಮುಂದೂಡಿರುವುದಾಗಿ ಘೋಷಿಸಿದರು.