ನಮ್ಮ ಮನೆ ಬಿಜೆಪಿ ಮನೆ ಅಭಿಯಾನಕ್ಕೆ ಹರಪನಹಳ್ಳೀಲಿ ಚಾಲನೆ

ಹರಪನಹಳ್ಳಿ: ರಾಷ್ಟ್ರದ ಸರ್ವಾಂಗೀಣ ಅಭ್ಯುದಯಕ್ಕಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ನಮ್ಮ ಮನೆ ಬಿಜೆಪಿ ಮನೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ ಹೇಳಿದ್ದಾರೆ.

ಪಟ್ಟಣದ ಕುರುಬರಗೇರಿಯಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ನಮ್ಮ ಮನೆ ಬಿಜೆಪಿ ಮನೆ ಕಾರ್ಯಕ್ರಮ ನಿಮಿತ್ತ ಪಕ್ಷದ ಮುಖಂಡ ವೈ.ಕೆ.ಬಿ.ದುರುಗಪ್ಪ ಅವರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋದಿ ಚುನಾವಣೆ ಪೂರ್ವದಲ್ಲಿ ಕೈಗೊಂಡಿದ್ದ ಸಂಕಲ್ಪ ಸಾಕಾರಗೊಳಿಸಿದ್ದಾರೆ. ಬಡತನ ನಿರ್ಮೂಲನೆಗಾಗಿ ಬ್ಯಾಂಕ್‌ಗಳಲ್ಲಿ 31.52 ಕೋಟಿ ಖಾತೆ ತೆರೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅನ್ನದಾರ ಸುಖಿಯಾಗಿರುವಲು ಫಸಲ್ ಭೀಮಾ, ಕೃಷಿ ಸಿಂಚಾಯಿ ಯೋಜನೆ ಆರಂಭಿಸಿದ್ದಾರೆ ಎಂದರು.

ತಾಲೂಕು ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಬಿಜೆಪಿ ರೈತರ ಹಿತ ಕಾಯುವ ದೃಷ್ಟಿಯಿಂದ ಪಾರಂಪರಿಕ ಕೃಷಿ ಉತ್ತೇಜನಕ್ಕೆ ಕೃಷಿ ವಿಕಾಸ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್, ಪಶು ಸಂಪನ್ಮೂಲಕ ಸುಸ್ಥಿರ ಅನುವಂಶಿಕತೆಯನ್ನು ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾಮಧೇನು ಆಯೋಗ ರಚಿಸಿದ್ದಾರೆ.

ಮುಖಂಡ ವೈ.ಕೆ.ಬಿ.ದುರುಗಪ್ಪ ಮಾತನಾಡಿ, ಮೋದಿ ಅವರ ಮಹಿಳಾ ಸಬಲೀಕರಣ, ಸ್ವಚ್ಚ ಭಾರತ, ಸ್ವಸ್ಥ ಭಾರತ, ಕೌಶಲ್ಯಾಭಿವೃದ್ದಿ, ಸ್ವಾವಲಂಬನೆ, ಸ್ವ ಉದ್ಯೋಗ ಕಾರ್ಯಕ್ರಮದ ಮೂಲಕ ರಾಷ್ಟ್ರದ ಜನತೆಯ ಮನಸ್ಸು ಗೆದ್ದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಬಿಜೆಪಿ ಬೆಂಬಲಿಸಿ ಎಂದು ಹೇಳಿದರು.

ನಮ್ಮ ಮನೆ ಬಿಜೆಪಿ ಮನೆ ತಾಲೂಕು ಉಸ್ತುವಾರಿ ಬೆಣ್ಣಿಹಳ್ಳಿ ರೇವಣ್ಣ, ಯುವ ಮುಖಂಡ ಮದನ್ ಪೂಜಾರ, ಚಾರೆಪ್ಪ, ರೇವಣಸಿದ್ದಪ್ಪ, ನರೇಂದ್ರ, ಬಾಗಳಿ ಪರಶುರಾಮಪ್ಪ, ಹಾಲೇಶ್, ಬಸವರಾಜ್ ಇತರರಿದ್ದರು.