ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಓದಿಸುವ ದೃಢನಿರ್ಧಾರ ಕೈಗೊಳ್ಳಬೇಕು ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸಲಹೆ ನೀಡಿದರು.
ತಾಲೂಕಿನ ಅರಸೀಕೆರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿ ಅಡುಗೆ, ಶಾಲಾ ಕೊಠಡಿಗಳನ್ನು ವೀಕ್ಷಿಸಿ ಮಾತನಾಡಿ, ನಾನು ಈ ಶಾಲೆಯ ಹಳೇ ವಿದ್ಯಾರ್ಥಿ. ಇಲ್ಲಿನ ಪ್ರಗತಿಗೆ ಸಹಕಾರ ನೀಡುವೆ ಎಂದು ಭರವಸೆ ನೀಡಿದರು.
ಅಡುಗೆ ಕೋಣೆ, ಶಾಲಾ ಆವರಣ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳು ಇನ್ನಷ್ಟು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿ ಊಟ, ಬಟ್ಟೆ, ಸೈಕಲ್ ಸೇರಿ ಅನೇಕ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಗ್ರಾಮದ ಜನರಲ್ಲಿ ಇದರ ಅರಿವು ಬಿತ್ತಬೇಕು. ಬಡತನದಲ್ಲೂ ಲಕ್ಷಾಂತರ ವಂತಿಗೆ ನೀಡಿ ಕಾನ್ವೆಂಟ್ಗಳಿಗೆ ಸೇರಿಸದಂತೆ ಜಾಗೃತಿ ಮೂಡಿಸಬೇಕು ಎಂದರು.
ಮುಖ್ಯಶಿಕ್ಷಕ ಅರ್ಜುನ್ ಪರಸಪ್ಪ ಮಾತನಾಡಿ, ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವಂತೆ ಸಂಸದರಲ್ಲಿ ಮನವಿ ಮಾಡಿದರು
ಪ್ರತಿಕ್ರಿಯಿಸಿದ ಸಂಸದರು, ಈಗಾಗಲೇ ಶಾಲೆಗೆ ಒಂದು ಕೊಠಡಿ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಹಾಗೂ ಶಿಕ್ಷಕರ ನಿಯೋಜನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗ ಜತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಡಿ.ಅಣ್ಣಪ್ಪ, ಮಹಮದ್ ಸಾಹೇಬ್, ದೊಡ್ಡ ಹನುಮಂತಪ್ಪ, ಪಂಪಣ್ಣ, ಷಣ್ಮುಖಪ್ಪ, ಪರಶುರಾಮ್, ದುರುಗಪ್ಪ, ಇಂಜಿನಿಯರ್ ಪ್ರದೀಪ್ ಇತರರಿದ್ದರು.