ಎಲ್ಲರ ಅಭಿಪ್ರಾಯ ಪಡೆದು ರಾಮಮಂದಿರ ನಿರ್ಮಿಸಿದರೆ ತಪ್ಪಿಲ್ಲ

ಹರಪನಹಳ್ಳಿ: ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲರ ಒಮ್ಮತದ ಅಭಿಪ್ರಾಯ ಪಡೆದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದರೆ ತಪ್ಪಿಲ್ಲ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಕೆಲವೇ ಜನರ ಅಭಿಪ್ರಾಯವನ್ನು ಸಾರ್ವತ್ರಿಕವೆಂದು ಹೇಳುವುದು ಸರಿಯಲ್ಲ. ಎಲ್ಲ ಜಾತಿಯವರ ವಿಶ್ವಾಸ ಗಳಿಸಿಕೊಂಡು ರಾಮ ಮಂದಿರ ನಿರ್ಮಿಸಿದರೆ ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಏಕ ಅಭಿಪ್ರಾಯ ಬಂದರೆ ಉತ್ತಮ ನಡೆಯಾಗುತ್ತದೆ ಎಂದು ಹೇಳಿದರು.

ಗೊಂದಲ ನಿವಾರಣೆಗೆ ಪ್ರಯತ್ನ: ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮಕ್ಕೆ ಸಂಬಂಧಪಟ್ಟಂತೆ ಎದ್ದಿರುವ ಗೊಂದಲ ನಿವಾರಣೆಗೆ ವೀರಶೈವ ಮಹಾಸಭಾದಿಂದ ತಿಳಿಗೊಳಿಸುವ ಕೆಲಸ ಮಾಡಲಾಗುವುದು. ಇಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಲಿಂಗಾಯತ ಧರ್ಮ ಬೇಡಿಕೆಗೆ ಹೋರಾಟ ನಡೆಸುತ್ತಿರುವ ಪ್ರಮುಖರ ಮನವೊಲಿಸಲು ಬಾದಾಮಿ ತಾಲೂಕಿನ ಶಿವಯೋಗಿ ಮಂದಿರಲ್ಲಿ ಬುಧವಾರ ನಡೆದ ವೀರಶೈವ ಮಠಾಧೀಶರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

ವೀರಶೈವ ಲಿಂಗಾಯತ ಧರ್ಮದ ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಗುರುಪೀಠದ ಜೊತೆಗೆ ವಿರಕ್ತ ಮಠಾಧೀಶರು ಸಾಮರಸ್ಯದಿಂದ ನಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಗುರು ಪೀಠ ಮತ್ತು ವಿರಕ್ತರು ಸೇರಿ ವರ್ಷದಲ್ಲಿ ಎರಡು ಬಾರಿ ದೊಡ್ಡ ಮಟ್ಟದ ಧಾರ್ಮಿಕ ಸಮಾರಂಭ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಪ್ರಸಾದಕ್ಕೆ ವಿಷ ಬೆರೆಸಿದ್ದು ಘೋರ: ವೈಯಕ್ತಿಕ ದ್ವೇಷಕ್ಕಾಗಿ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣ ಅತ್ಯಂತ್ಯ ಕೆಟ್ಟದ್ದು. ಭಕ್ತರ ಸಾವು-ನೋವಿಗೆ ಕಾರಣರಾದವರ ಮೇಲೆ ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳಿದರು.