ಬಾಲ ಕಾರ್ಮಿಕ ಪದ್ಧತಿ ಪ್ರಗತಿಗೆ ಮಾರಕ

ಹರಪನಹಳ್ಳಿ: ಮಕ್ಕಳನ್ನು ದುಡಿಸಿಕೊಳ್ಳುವುದು ದೇಶದ ಪ್ರಗತಿಗೆ ಮಾರಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಧ್ಯಕ್ಷೆ ಉಂಡಿ ಮಂಜುಳಾ ಶಿವಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಕೂಲಿಗೆ ಕಳುಹಿಸುವುದು ಕಾನೂನು ಪ್ರಕಾರ ಅಕ್ಷಮ್ಯ ಅಪರಾಧ. ದೈಹಿಕ ಸಾಮರ್ಥ್ಯ ಮೀರಿದ ಕೆಲಸಕ್ಕೆ ಕಳಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರು.

ವಕೀಲರಾದ ಎಂ. ಮೃತ್ಯುಂಜಯಪ್ಪ ಉಪನ್ಯಾಸ ನೀಡಿ, ವಿಶ್ವದಲ್ಲಿ 700 ಬಿಲಿಯನ್ ಬಾಲ ಕಾರ್ಮಿಕರಿದ್ದಾರೆ. ಭಾರತದಲ್ಲಿ 33 ದಶ ಲಕ್ಷ ಬಾಲ ಕಾರ್ಮಿಕರಿದ್ದಾರೆ. ವರ್ಷದಲ್ಲಿ 60 ಸಾವಿರ ಮಕ್ಕಳು ಕಣ್ಮರೆಯಾಗುತ್ತಿರುವ ಬಗ್ಗೆ ವರದಿಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪಿಎಸ್‌ಐ ಕೆ. ಶ್ರೀಧರ್ ಮಾತನಾಡಿ, ಸರ್ಕಾರಿ ಕೆಲಸಕ್ಕೆ ಜೋತು ಬೀಳದೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಜೆ. ಶೋಭಾ, ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿದರು. ತಹಸೀಲ್ದಾರ್ ಡಾ. ನಾಗವೇಣಿ ಅಧ್ಯಕ್ಷತೆವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್. ದೇಸಾಯಿ, ವಕೀಲ ಕೆ. ಬಸವರಾಜ, ಕಾರ್ಮಿಕ ನಿರೀಕ್ಷಕ ವಿ. ವೇಮಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಲಿಂಗಾನಂದ, ಜಗದೀಶಗೌಡ, ಕೆ. ಪ್ರಕಾಶ, ಮುಖ್ಯ ಶಿಕ್ಷಕ ಮುಸ್ತಾಫ್, ಸಿದ್ದಲಿಂಗನಗೌಡ, ಷಣ್ಮುಖಪ್ಪ, ಚೇತನ, ರಾಜಶೇಖರ, ಶಶಿಕಲಾ ಇತರರಿದ್ದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಹಾಗೂ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *