ಆಧುನಿಕ ಮಾಧ್ಯಮದಿಂದ ಹೊಸದಿಕ್ಕು: ಡಾ.ನಿಂಗಪ್ಪ ಮುದೇನೂರು ಅಭಿಮತ

ಹರಪನಹಳ್ಳಿ: ಓದುವ ಸಂಸ್ಕೃತಿ ಮತ್ತು ಗ್ರಹಿಕೆಗೆ ಹೊಸ ದಿಕ್ಕು ಪಡೆಯಲು ಆಧುನಿಕ ಮಾಧ್ಯಮವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ವಿವಿ ಡಾ.ಆರ್.ಸಿ.ಹಿರೇಮಠ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಅಭಿಪ್ರಾಯಪಟ್ಟರು.

ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ದಿನಾಚರಣೆಯಲ್ಲಿ ಮಾತನಾಡಿದರು.

ಜ್ಞಾನದ ಯುಗದಲ್ಲಿ ಓದಿನ ಪರಿ ಬದಲಾಗಬೇಕು. ಬೌದ್ಧಿಕತೆ ಜತೆಗೆ ಓದು, ಅರಿವಿನ ಜತೆ ಉತ್ತಮ ವಾತಾವರಣವಿದ್ದರೆ ಅಧ್ಯಯನಕ್ಕೆ ಚೈತನ್ಯ ಬರುತ್ತದೆ. ನದಿಯಂತಿರುವ ವಿದ್ಯಾರ್ಥಿಗಳನ್ನು ಕಲ್ಮಶಗೊಳಿಸುವ ಯತ್ನ ನಡೆಯುತ್ತವೆ. ಸಾಮಾಜಿಕ ಜಾಲತಾಣ, ಮೊಬೈಲ್ ದಾರಿ ತಪ್ಪಿಸುತ್ತವೆ ಎಂದರು.

ಕವಿ ಸೃಷ್ಟಿಸುವ ನಿಸರ್ಗ, ಸಾಹಿತ್ಯದಲ್ಲಿರುವ ಸದಾ ಹಸಿರು, ಕಾವ್ಯಗಳು ಸಮೃದ್ಧ ಕಾಡು ಪ್ರದರ್ಶಿಸುತ್ತವೆ. ಪಂಚತಂತ್ರದ ಕಥೆಗಳು ಓದುಗರನ್ನು ಸೆಳೆಯುತ್ತವೆ. ಇಂತಹ ಸಾಹಿತ್ಯ ರಚಿಸಿದ ಕುವೆಂಪು, ಬೇಂದ್ರೆ ಸಾಹಿತ್ಯದ ಹಿರಿಮೆ ಹೆಚ್ಚಿಸಿದರು ಎಂದು ಸ್ಮರಿಸಿದರು.

ವೈರುಧ್ಯದ ನಡುವೆಯೂ ಮಹತ್ಮಾ ಗಾಂಧಿ, ಅಂಬೇಡ್ಕರರಲ್ಲಿದ್ದ ಪೂರ್ಣದೃಷ್ಟಿ ಸಾಂಸ್ಕೃತಿಕ ಹೋರಾಟ ಹುಟ್ಟು ಹಾಕಿತು. ಸಾಮಾಜಿಕ, ಶೈಕ್ಷಣಿಕ ಬದುಕು ಸುಂದರಗೊಳಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಸೆಮಿಸ್ಟರ್‌ನಲ್ಲಿ ಕಾದಂಬರಿಯನ್ನು ಪಠ್ಯದಲ್ಲಿ ಅಳವಡಿಸಿದರೆ ಪೂರ್ಣ ಓದು ಸಾಧ್ಯವಿಲ್ಲ. ಸೃಜನಶೀಲ ಓದಿಗೆ ಸಾಧ್ಯವಾಗದ ಕಾಲಮಾನವಿದು. ಪೂರ್ಣ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಜೆರಾಕ್ಸ್, ನಕಲುಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.

ಯಾವುದೇ ವಿದ್ಯಾಸಂಸ್ಥೆ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ. ಓದು, ಬರವಣಿಗೆ ಜೀವಂತ ಇದ್ದರೂ ಕೆಲವು ಸಂದರ್ಭ ಸಾಧನೆಗೆ ಅಡ್ಡಿಯಾಗುತ್ತದೆ. ಅಲೆದಾಟದ ಸವಾಲು ಸ್ವೀಕರಿಸಿದಾಗ ಬೇಗ ಗುರಿ ತಲುಪಬಹುದು. ನಮಗೆ ನಾವೇ ಬೆಳಕಾಗುವ, ದೀಪವಾಗುವ ತಾಕತ್ತು ಬೆಳೆಸಿಕೊಳ್ಳಬೇಕು ಎಂದರು.

ಎಡಿಬಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ ಮಾತನಾಡಿ, ಏನಾದರೂ ಸಾಧಿಸುವ ಛಲ, ಕಠಿಣ ಪರಿಶ್ರಮ, ಏಕಾಗ್ರತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಮಾಜಿ ಅಧ್ಯಕ್ಷ ಪಟೇಲ್ ಬೆಟ್ಟನಗೌಡ್ರು ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ಅಂಬ್ಲಿ ಶೈಲಾ, ಪಟೇಲ್ ಜಗದೀಶಗೌಡ, ಪ್ರಾಚಾರ್ಯ ಡಾ.ಎಚ್.ಮಲ್ಲಿಕಾರ್ಜುನ ಗೌಡ, ನಿವೃತ್ತ ಪ್ರಾಚಾರ್ಯ ನಾಗೇಂದ್ರಪ್ಪ, ಎಸ್‌ಎಸ್‌ಎಚ್ ಜೈನ್ ಪಿಯು ಕಾಲೇಜ್ ಪ್ರಾಚಾರ್ಯ ಎಂ.ಕುರುವತ್ತೆಪ್ಪ, ಪ್ರಾಧ್ಯಾಪಕರಾದ ಡಾ.ತಿಪ್ಪೇಸ್ವಾಮಿ, ಜಿ.ಬಿ.ನಾಗನಗೌಡ, ಡಾ.ಸಿದ್ದಲಿಂಗಮೂರ್ತಿ, ಡಾ.ಶಂಕರಾನಂದ, ಮಂಜುನಾಥ್, ರಾಜಶೇಖರ, ನಾಗರಾಜ್, ಸುರೇಶ್, ಶಿವಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *