ಮಗು ಯಾವುದಾದರೇನು ಸಂಭ್ರಮಿಸಲು

ಹೆಣ್ಣು ಮಗುವೂ ಗಂಡಿನಂತೆ ಸಕಲ ಸೌಲಭ್ಯಗಳೊಂದಿಗೆ ಅಂದರೆ ವಿದ್ಯೆ, ಸ್ವಾಭಿಮಾನ, ಅವಕಾಶಗಳೊಂದಿಗೆ ಬೆಳೆಯಲು ಅನುವು ಮಾಡಿಕೊಡುವ ಭರವಸೆಯನ್ನು ಸಮಾಜ ನೀಡಿದರೆ ಹೆಣ್ಣು ಹುಟ್ಟಿದರೆ ಸೋತಂತೆ ಭಾವಿಸುವ ತಾಯಂದಿರ ಸಂಖ್ಯೆ ಕಮ್ಮಿಯಾಗಬಹುದು.

|ಡಾ. ಕೆ. ಎಸ್. ಪವಿತ್ರ

ಮನಸ್ಸನ್ನು ಬದಲಿಸಿಕೊಳ್ಳದೆ ಜಗತ್ತನ್ನು, ಸಮಾಜವನ್ನು ಬದಲಿಸಲು ಸಾಧ್ಯವಿಲ್ಲ. ಹೆಣ್ಣು ಶಿಶುಹತ್ಯೆಗೆ ಸಂಬಂಧಿಸಿದಂತೆ ಇದು ವಿಶೇಷವಾಗಿ ಅನ್ವಯಿಸುತ್ತದೆ. 1990ರಷ್ಟು ಅಂದರೆ ಸುಮಾರು 30 ವರ್ಷಗಳ ಹಿಂದೆಯೇ ಹೆಣ್ಣು ಶಿಶುಹತ್ಯೆಯ ಬಗ್ಗೆ ಮೊತ್ತಮೊದಲು ತಲೆಕೆಡಿಸಿಕೊಳ್ಳಲು ಆರಂಭಿಸಿದವರು ಅರ್ಥಶಾಸ್ತ್ರಜ್ಞರು! ನೊಬೆಲ್ ಪುರಸ್ಕೃತ ಅಮರ್ತ್ಯಸೇನ್ ಬರೆದ ಒಂದು ಪ್ರಬಂಧದಲ್ಲಿ ಚೀನಾದಲ್ಲಿ 5 ಕೋಟಿ ಮಹಿಳೆಯರು, ಭಾರತದಲ್ಲಿ 10 ಕೋಟಿ ಮಹಿಳೆಯರು ಕಾಣೆಯಾದ ಕಾರಣಗಳ ಬಗ್ಗೆ ಉಲ್ಲೇಖಿಸಿದರು. ಪ್ರಕೃತಿಸಹಜವಾಗಿ ಹುಟ್ಟುವಾಗ ಗಂಡು ಮಕ್ಕಳ ಸಂಖ್ಯೆ ಹೆಚ್ಚು. ಆದರೆ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಬದುಕುವ ಸಾಧ್ಯತೆ, ರೋಗನಿರೋಧಕತ್ವ ಶಕ್ತಿಯಲ್ಲಿ ಮುಂದು. ಮುಂದುವರಿದ ರಾಷ್ಟ್ರಗಳ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ನೈಸರ್ಗಿಕ ವಿಕೋಪ, ಬಡತನ ಹೆಚ್ಚಿರುವ ಆಫ್ರಿಕಾದಲ್ಲಿಯೂ ಮಹಿಳೆಯರ ಸಂಖ್ಯೆ ಪುರುಷರದ್ದನ್ನು ಮೀರುತ್ತದೆ. ಆದರೆ ಏಷ್ಯಾದ ರಾಷ್ಟ್ರಗಳಲ್ಲಿ ವಿಶೇಷವಾಗಿ ಭಾರತ ಮತ್ತು ಚೀನಾಗಳಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಪರಿಸ್ಥಿತಿ. ತಮ್ಮ 30 ವರ್ಷಗಳಷ್ಟು ಹಳೆಯ ಪ್ರಬಂಧದಲ್ಲಿ ಅಮರ್ತ್ಯಸೇನ್ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿ ಲಿಂಗ ಅಸಮಾನತೆ, ಅದರ ಪರಿಣಾಮವಾಗಿ ಮಹಿಳೆಗೆ ಲಭ್ಯವಿರದ ಆರ್ಥಿಕ ಸ್ವಾವಲಂಬನೆ, ಆಸ್ತಿ ಹಕ್ಕು, ವಿದ್ಯಾಭ್ಯಾಸ, ಮತ್ತು ಔದ್ಯೋಗಿಕ ಅವಕಾಶಗಳೆಂದು ಗುರುತಿಸಿದ್ದಾರೆ. ಇವುಗಳನ್ನು ಸರಿಪಡಿಸುವುದೇ ಈ ಸ್ಥಿತಿ ಬದಲಾಗಲು ಇರುವ ಮಾರ್ಗಗಳೆಂದು ಒತ್ತಿ ಹೇಳಿದ್ದಾರೆ.

ಇದರ ನಂತರ ಬಂದದ್ದು ವಿಶ್ವಬ್ಯಾಂಕ್​ನ ಪ್ರಗತಿ ಸಂಶೋಧನಾ ತಂಡದ ಇನ್ನೊಂದು ಪ್ರಬಂಧ- ಏಷ್ಯಾದ ‘ಕಾಣೆಯಾದ ಹುಡುಗಿಯರು’ ಪ್ರಕ್ರಿಯೆಯಲ್ಲಿ ಆರಂಭಿಕ ತಿರುಗುವಿಕೆ ಕಾಣುತ್ತಿದೆಯೇ?’. ಎಂದು. ಇದರಲ್ಲಿ ಮೋನಿಕಾ ದಾಸ್ ಗುಪ್ತ ದಕ್ಷಿಣ ಕೊರಿಯಾದ ಉದಾಹರಣೆಗಳೊಂದಿಗೆ ಸಮಾಜಗಳ ರೂಢಿಗತ ಧೋರಣೆಗಳು ಬದಲಾಗುವುದೇ ಹೆಣ್ಣು ಭ್ರೂಣ ಹತ್ಯೆಯನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಗುರುತಿಸಿದ್ದಾರೆ.

ಸಮಾಜದ ರೂಢಿಗತ ಧೋರಣೆಗಳು ಬದಲಾಗುವುದು ಎಂದರೇನು? ಸಮಾಜದ ‘ನಾರ್ಮಲ್ ಥಿಂಕಿಂಗ್’ ಏನು? ಹಿಂದೆ, ಕುಟುಂಬ ಯೋಜನೆ ಎಂಬ ಪರಿಕಲ್ಪನೆ ಬರುವುದಕ್ಕೆ ಮೊದಲು ದಂಪತಿಗೆ ಮದುವೆಯಾದ ಮೇಲೆ ಎಷ್ಟು ಬೇಕಾದರೂ ಮಕ್ಕಳಾಗಬಹುದಿತ್ತು. ಸಹಜವಾಗಿ ನಾಲ್ಕೈದರಿಂದ ಹತ್ತು ಮಕ್ಕಳವರೆಗೆ ಹೆಣ್ಣು-ಗಂಡು ಇಬ್ಬರೂ ಹುಟ್ಟುತ್ತಿದ್ದರು. ಸೋಂಕು ರೋಗರುಜಿನಗಳಿಂದ ಇವರಲ್ಲಿ ಕೆಲವು ಮಕ್ಕಳು ಉಳಿಯುತ್ತಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಕ್ರಮೇಣ ಪರಿಸ್ಥಿತಿ ಬದಲಾಯಿತು. ಜನಸಂಖ್ಯೆ ಹೆಚ್ಚಾಯಿತು, ಆಧುನಿಕ ವೈದ್ಯ ವಿಜ್ಞಾನ ಜೀವಗಳನ್ನು ಉಳಿಸಲಾರಂಭಿಸಿತು, ಜನಸಂಖ್ಯೆ ಹೆಚ್ಚಾದ ತಕ್ಷಣ ಕುಟುಂಬ ಯೋಜನೆಯ ಅವಶ್ಯಕತೆ ಮೊದಲಾಯಿತು.

ಹಾಗಿದ್ದರೆ ಆಧುನಿಕ ವೈದ್ಯವಿಜ್ಞಾನವು ಕುಟುಂಬ ಯೋಜನೆ, ಹೆಣ್ಣು ಭ್ರೂಣಹತ್ಯೆಗಳನ್ನು ತಂದಿತೆಂದು ದೂರಬೇಕೆ? ಇಲ್ಲ, ಅವುಗಳನ್ನು ತಪ್ಪಾಗಿ ಅರ್ಥೈಸಿಕೊಂಡ, ದುರುಪಯೋಗಪಡಿಸಿಕೊಂಡ ನಮ್ಮ ಬುದ್ಧಿ – ಮನಸ್ಸುಗಳನ್ನು ದೂರಬೇಕು. ಏಕೆಂದರೆ ಹೆಣ್ಣು ಶಿಶುಹತ್ಯೆಯ ಚರಿತ್ರೆ ಗಮನಿಸಿದರೆ ಭಾರತದ ಕೆಲವೆಡೆ ಅದು ಶತಮಾನಗಳಿಂದ ಜಾರಿಯಲ್ಲಿದ್ದದ್ದು ಕಂಡುಬರುತ್ತದೆ. ಹಾಗಾಗಿ ರೂಢಿಗತ ಧೋರಣೆಯೆಂದರೆ, ‘ಗಂಡು ಮಗು ಶ್ರೇಷ್ಠ, ಮುಂದೆ ಸುಖವಾಗಿ ಬದುಕಬಲ್ಲ. ಹೆಣ್ಣು ಮಗು ಎಷ್ಟೇ ಸಾಮರ್ಥ್ಯದಿಂದ ಕೂಡಿದ್ದರೂ ಮುಂದೆ ಆಕೆ ನರಳಲೇಬೇಕು’.

ಈ ಧೋರಣೆ ನಮ್ಮ ಮಾತುಗಳಲ್ಲಿ, ನಡವಳಿಕೆಯಲ್ಲಿ ಇಂದಿಗೂ ಕಂಡುಬರುವಂಥದ್ದು. ಜಾತಿ, ಅಂತಸ್ತು, ವಿದ್ಯೆ, ಮತ ಕೊನೆಗೆ ಲಿಂಗ ಯಾವುದರ ಭೇದವೂ ಇಲ್ಲದೆ ಸಾರ್ವತ್ರಿಕವಾಗಿ ಕಂಡುಬರುವ ಮನೋಭಾವ ಇದು! ಮಗನಿಂದ ಹೊಡೆಸಿಕೊಂಡು ಮನೆಯಿಂದ ಹೊರಬಿದ್ದಿರುವ ತಾಯಿ ಖಿನ್ನತೆಯಿಂದ ವೈದ್ಯರ ಬಳಿ ಬರುತ್ತಾಳೆ. ಅದರೆ ತನ್ನ ಮಗಳಿಗೆ ‘ಗಂಡು ಮಗು’ವೇ ಆಗಲಿ ಎಂದು ಆಶಿಸುತ್ತಾಳೆ. ಗಂಡು ಮಗು ಹುಟ್ಟಿದಾಕ್ಷಣ ತಾಯಿಗೆ ಅದು ‘ತನ್ನ ಮಗು’ ಎಂಬ ಕಾರಣಕ್ಕಷ್ಟೇ ಪ್ರಿಯವಾಗಬಹುದು, ಗಂಡು ಮಗು ಎಂಬ ‘ವಿಶೇಷ’ ಕಾರಣಕ್ಕಲ್ಲ! ಆದರೆ ಇತರರಿಗೆ ಅದು ಸಂಭ್ರಮದ ಸಂದರ್ಭ ಎನಿಸುವುದು ಅದು ‘ಗಂಡು’ ಮಗು ಎಂಬ ಕಾರಣಕ್ಕೆ ಎನ್ನುವುದು ಇಂದಿನ ಕಾಲದಲ್ಲೂ ಸತ್ಯವೇ!

ಹೆಣ್ಣುಮಕ್ಕಳು ಬೇಕಾದ್ದನ್ನು ಮಾಡಲು ಸಮರ್ಥರಿರುವ ಇಂದಿನ ದಿನಗಳಲ್ಲೂ ಗಂಡು ಮಗುವಾದರೆ ಮಾತ್ರ ಮುಖವರಳುವುದು, ಹೆಣ್ಣು ಮಗು ಎಂದಾಕ್ಷಣ ಮುಖ ಬಾಡುವುದು ಏಕೆ? ಮಗು ಹುಟ್ಟಿದೆ ಎಂಬ ಒಂದೇ ಕಾರಣಕ್ಕೆ ಅದು ‘ಹೆಣ್ಣೇ-ಗಂಡೇ’ ಎಂದು ಪ್ರಶ್ನಿಸದೆ, ಆರೋಗ್ಯಕರ ಹುಟ್ಟನ್ನು ಸಂಭ್ರಮಿಸುವ ಸಂದರ್ಭ ಇಂದಿಗೂ ಏಕೆ ವಿರಳ? ಸರ್ಕಾರದ ಕಠಿಣ ಕ್ರಮಗಳ ನಡುವೆಯೂ, ‘ಸ್ಕ್ಯಾನ್ ಮಾಡಿದ ಡಾಕ್ಟ್ರು ಮಗು ಹೆಣ್ಣು ಅಂತ ಹೇಳಲೇ ಇಲ್ಲ. ಹೇಳಿದ್ರೆ ಆವಾಗ್ಲೇ ತೆಗೆಸಿಬಿಡ್ತಿದ್ವಿ’ ಎಂದು ತಾಯಿ ಅಲವತ್ತುಕೊಳ್ಳುವುದು ಏಕೆ?!

ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡರೆ ಹಲವು ಉತ್ತರಗಳು ಹೊಳೆಯುತ್ತವೆ. ಸಾಮಾನ್ಯವಾಗಿ ಹೆಣ್ಣು ಶಿಶು/ಭ್ರೂಣಹತ್ಯೆಗೆ ಆ ಮಗುವಿನ ತಾಯಿಯನ್ನು ದೂಷಿಸಲಾಗುತ್ತದೆ. ಆದರೆ ಬಾಲ್ಯದಿಂದ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕೆಲಸಕ್ಕೆ ಸಮಾಜ ಸಾವಿರ ತಡೆಗಳನ್ನು ಒಡ್ಡುತ್ತದೆ. ಬಾಣಂತನದ ರಾತ್ರಿಗಳನ್ನು ನೆನಪಿಸಿಕೊಳ್ಳಿ. ನಿದ್ರೆಗಾಗಿ ನೀವು ಕಾತರಿಸುವಾಗ, ಮಗು ಮತ್ತೆ ಮತ್ತೆ ಎದ್ದು ಅತ್ತಾಗ, ಈ ಮಗು ಸುಮ್ಮನಾಗಿದ್ದರೆ…ಯಾರಾದರೂ ಸ್ವಲ್ಪ ಹೊತ್ತು ಕರೆದುಕೊಂಡರೆ… ಎಂದುಕೊಂಡ ದಿನಗಳು ನೆನಪಿವೆಯೇ? ದಿನವಿಡೀ ದುಡಿತ, ಪ್ರೀತಿಯ ಮಾತುಗಳ ಕೊರತೆ. ನಿಮ್ಮ ದೇಹ-ಮನಸ್ಸುಗಳೆರಡೂ ಸುತ್ತಲ ಭೂಮಿಯಂತೆ ಗಟ್ಟಿಯಾಗಿ ಹೋಗಿರುವ ಸಂದರ್ಭ. ಮೊದಲ ಮಗಳನ್ನೇ ನೋಡಲು ಸಮಯವಿಲ್ಲದ ಮಹಿಳೆಗೆ ಇನ್ನೂಂದು ಹೆಣ್ಣು ಮಗುವಾದರೆ ಏನು ಮಾಡುತ್ತಾಳೆ?

ಸರ್ಕಾರಗಳು ತೊಟ್ಟಿಲನ್ನು ಇಟ್ಟು ನಿಮಗೆ ಬೇಡವಾದ ಮಗುವನ್ನು ನಮಗೆ ಕೊಡಿ, ನಾವು ಸಾಕುತ್ತೇವೆ ಎಂದಿವೆ. ಎರಡನೆಯ ಹೆಣ್ಣು ಮಗುವಿಗೆ, ತಾಯಿಗೆ ದುಡ್ಡು ನೀಡುವ ಸೌಲಭ್ಯ ಮಾಡಿವೆ. ನಿಯಮಕ್ಕೆ ವಿರುದ್ಧವಾಗಿ ಕೆಲಸ ಮಾಡುವ ಸ್ಕ್ಯಾನ್ ಸೆಂಟರ್​ಗಳ ಪರವಾನಗಿ ರದ್ದುಗೊಳಿಸಿದೆ. ಇವೆಲ್ಲದರಿಂದ ಹೆಣ್ಣು ಭ್ರೂಣಹತ್ಯೆಯಲ್ಲಿ ಇಳಿಕೆ ಉಂಟಾಗಿರಬಹುದು. ಆದರೆ ‘ಅಯ್ಯೋ ಪಾಪ ಎರಡೂ ಹೆಣ್ಣು ಮಕ್ಕಳಂತೆ’, ಎಂದು ರಾಗವೆಳೆಯುವುದು ನಿಂತಿಲ್ಲ. ‘ಗಂಡು ಮಗುವಾಗಲಿ’ ಎಂದು ಹೆಂಗಸರು ಹರಕೆ ಹೊರುತ್ತಲೇ ಇದ್ದಾರೆ. ಹೆಣ್ಣು ಹುಟ್ಟಿದಾಗ ಯಾರಿಗೂ ಹೇಳದೆ, ಸಂಭ್ರಮ ಪಡದೆ ಮನದಲ್ಲಿಯೇ ಕೊರಗುವ ಶ್ರೀಮಂತರೂ ವಿದ್ಯಾವಂತರೂ ಇದ್ದಾರೆ. ಅಂದರೆ ಹೀಗೆ ಮಾಡುವವರಲ್ಲಿ ವಿದ್ಯೆ, ಜಾತಿ, ಅಂತಸ್ತುಗಳ ಯಾವ ಭೇದವೂ ಇಲ್ಲ ಎಂಬುದೇ ಅಚ್ಚರಿಯ ಸಂಗತಿ! ಇಂದು ತಂದೆ-ತಾಯಿಯ ಯಾವುದೇ ಉದ್ಯಮವನ್ನು ಯಶಸ್ವಿಯಾಗಿ ಮುಂದುವರಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಹುಟ್ಟಿದ ಮನೆಯ ಹೆಸರನ್ನೇ ಮುಂದುವರಿಸಿರುವ, ಯಾವ ಅಡ್ಡ ಹೆಸರಿನ ಅಗತ್ಯವೂ ಇರದೆ ತಮ್ಮ ಹೆಸರಷ್ಟನ್ನೇ ಬೆಳೆಸಿಕೊಂಡ ಹೆಣ್ಣುಮಕ್ಕಳೂ ಇದ್ದಾರೆ ಎನ್ನುವುದನ್ನು ನಾವೆಲ್ಲರೂ ಗಮನಿಸಬೇಕು, ಮನಸ್ಸು ಬದಲಿಸಿಕೊಳ್ಳಬೇಕು. ಹಾಗೆ ಬದಲಾದ ಮನಸ್ಸನ್ನು ನಮ್ಮ ನಡೆನುಡಿಗಳ ಮೂಲಕ ತೋರಿಸುವುದನ್ನು ಪ್ರಯತ್ನಪೂರ್ವಕವಾಗಿ ಕಲಿಯಬೇಕು. ಆಗಷ್ಟೇ ಹುಟ್ಟಿದ ಮಗುವಿನ ‘ಅಮ್ಮ’ನನ್ನು ಕಂಡಾಗ ಮಗು ಯಾವುದು ಎಂದು ಕೇಳದೆ ಮೊದಲು ‘ಶುಭಾಶಯ’ ಹೇಳುವುದನ್ನು ರೂಢಿಸಿಕೊಳ್ಳಬೇಕು!

ಸಮಾಜ ಭರವಸೆ ನೀಡದು…

ತಮಿಳುನಾಡಿನ ಉಸಿಲಾಂಪಟ್ಟಿ ತಾಲೂಕಿನಲ್ಲಿ ನವಜಾತ ಹೆಣ್ಣು ಶಿಶುವಿಗೆ ಹಾಲಿನ ಜತೆಗೆ ಒಂದು ಜಾತಿಯ ಎಕ್ಕದ ಗಿಡದ ರಸ ಹಾಕಿ ನೆಕ್ಕಿಸುತ್ತಿದ್ದರಂತೆ. ಅದರಿಂದ ಒಂದು ಗಂಟೆಯ ಒಳಗೆ ಮಗು ಪ್ರಾಣ ಬಿಡುತ್ತಿತ್ತು. ತಾಯಿ ಹೀಗೇಕೆ ಮಾಡುತ್ತಾಳೆ? ಎರಡು ಮುಖ್ಯ ಕಾರಣಗಳು ಇಲ್ಲಿವೆ. ಮೊದಲನೆಯದು ‘ತನ್ನಂತೆ ತನ್ನ ಮಗಳು ನರಳದಿರಲಿ’ ಎಂಬ ವಾತ್ಸಲ್ಯದಿಂದ. ಸಾಯಿಸುವುದಕ್ಕಿಂತ ಜೀವನಪೂರ್ತಿ ಹೆಣ್ಣು ಮಗುವನ್ನು ನಿರ್ಲಕ್ಷಿಸುವುದು, ವಿವಿಧ ಕಷ್ಟಗಳಿಗೆ ಒಳಪಡಿಸುವುದು ಇನ್ನೂ ಅಸಹನೀಯ ಎನ್ನಿಸುವುದರಿಂದ, ‘ನನ್ನ ಮಗು ಎಂದರೆ ನಾನು’ ಎಂಬ ಭಾವ ಪ್ರತಿಯೊಂದು ತಾಯಿಗೆ ಇರುವುದರಿಂದ! ಏಕೆಂದರೆ, ಆ ತಾಯಿಗೆ ತನ್ನ ಮಗಳ ಆರ್ಥಿಕ ಭದ್ರತೆ, ಸುರಕ್ಷತೆ, ಸ್ವಾತಂತ್ರ್ಯ ಯಾವುದರ ಬಗೆಗೂ ಸಮಾಜ ಭರವಸೆಯನ್ನು ನೀಡಲಾರದು. ಅದೇ ಗಂಡು ಮಗುವಾದ ತಕ್ಷಣ ಆ ತಾಯಿಯ ಎಲ್ಲವನ್ನೂ ಸಮಾಜ ನೋಡಿಕೊಳ್ಳಲಾಗದಿದ್ದರೂ ಭರವಸೆಯನ್ನಂತೂ ನೀಡುತ್ತದೆ. ಎರಡನೆಯ ಕಾರಣ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮನೋಭಾವದಿಂದ ಹೆಣ್ಣು ಮಗುವನ್ನು ಹೆತ್ತ ತಾಯಿ ತನ್ನನ್ನು ತಾನು ‘ಸೋತವಳು’ ಎಂದು ಭಾವಿಸುತ್ತಾಳೆ. ಗಂಡು ಮಗುವನ್ನು ಹೆತ್ತ ತಾಯಿ ತನ್ನನ್ನು ತಾನು ‘ಗೆದ್ದವಳು’ ಎಂದು ಏನನ್ನೋ ಮಹತ್ವದ್ದನ್ನು ಸಾಧಿಸಿದ ಮನೋಭಾವದಲ್ಲಿ ಬೀಗುತ್ತಾಳೆ.