ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಸಿಕ್ಕ ಜಯವಿದು: ಪಂಚರಾಜ್ಯಗಳ ಫಲಿತಾಂಶದ ಬಗ್ಗೆ ಸೋನಿಯಾ ಹೇಳಿಕೆ

ದೆಹಲಿ: ದೇಶದ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ನೀಡಿದ ಗೆಲುವು ಎಂದು ಯುಪಿಎ ಮುಖ್ಯಸ್ಥೆ, ಕಾಂಗ್ರೆಸ್​ ವರಿಷ್ಠರಾದ ಸೋನಿಯಾಗಾಂಧಿ ಹೇಳಿಕೆ ನೀಡಿದ್ದಾರೆ.

ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದ್ದರೂ, ಈ ವರೆಗೆ ಎಲ್ಲಿಯೂ ಮಾತನಾಡದ ಸೋನಿಯಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಅದೂ ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ತಮ್ಮನ್ನು ಎದುರಾದ ಮಾಧ್ಯಮಗಳೊಂದಿಗೆ ಚುಟುಕಾಗಿ ಮಾತನಾಡಿದರು.

” 3-0 ಅಂತರದ ಈ ಗೆಲುವು ನನಗೆ ಸಂತೋಷ ತರಿಸಿದೆ. ಬಿಜೆಪಿಯ ನಕಾರಾತ್ಮಕ ರಾಜಕಾರಣದ ವಿರುದ್ಧ ಕಾಂಗ್ರೆಸ್​ಗೆ ಸಿಕ್ಕ ಬಹುದೊಡ್ಡ ಗೆಲುವಿದು,” ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎನ್ನಲಾಗುತ್ತಿದ್ದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ ಒಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಮೂರು ದೊಡ್ಡ ರಾಜ್ಯಗಳನ್ನು ದಕ್ಕಿಸಿಕೊಂಡಿತ್ತು. ಆದರೆ, ಬಿಜೆಪಿ ತನ್ನ ಬಳಿ ಇದ್ದ ಮೂರೂ ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿತ್ತು. ಇನ್ನೆರಡು ರಾಜ್ಯಗಳಲ್ಲಿ ಅದು ತಲಾ ಒಂದೊಂದು ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.