ಸಡಗರದ ದೀಪಾವಳಿ ಆಚರಣೆ

ಹಾವೇರಿ: ಅಂಧಕಾರ ತೊಲಗಿಸುವ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ನಗರ ಹಾಗೂ ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ, ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮನೆ, ಅಂಗಡಿ-ಮುಂಗಟ್ಟುಗಳಿಗೆ ತಳಿರು ತೋರಣ, ರಂಗೋಲಿ ಹಾಕಿ, ದೀಪಾಲಂಕಾರ ಮಾಡಲಾಗಿತ್ತು. ಹಣ್ಣು, ಹೂವು ಹಾಗೂ ಸಿಹಿ ಆಹಾರ ಪದಾರ್ಥ ತಯಾರಿಸಿ ಲಕ್ಷ್ಮೀ ದೇವಿಗೆ ನೈವೇದ್ಯ ಅರ್ಪಿಸುವ ಮೂಲಕ ಜನತೆಗೆ ದೇವರ ಕೃಪೆಗೆ ಪಾತ್ರರಾದರು.

ಬೆಳಗ್ಗೆಯಿಂದ ಸಂಜೆವರೆಗೂ ಮಾರುಕಟ್ಟೆಯಲ್ಲಿ ಅಲಂಕಾರಿಕ ಸಾಮಗ್ರಿಗಳು, ಆಕಾಶಬುಟ್ಟಿ, ಹಣ್ಣು-ಹಂಪಲು, ಹೂವು, ಕಬ್ಬು, ಮಾವಿನ ಎಲೆ, ಬಾಳೆದಿಂಡಿನ ವ್ಯಾಪಾರ ಜೋರಾಗಿತ್ತು. ಕೆಲವರು ತಮ್ಮ ಅಂಗಡಿ, ವ್ಯಾಪಾರ ವಹಿವಾಟನ್ನು ಬೆಳಗ್ಗೆಯಿಂದಲೇ ಬಂದ್ ಮಾಡಿ ಲಕ್ಷ್ಮೀ ಪೂಜೆಯಲ್ಲಿ ತೊಡಗಿದ್ದರು. ಕುಟುಂಬಸ್ಥರೆಲ್ಲ ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಸಂಜೆ ವೇಳೆಗೆ ಅಂಗಡಿಗಳನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿ, ರಂಗುರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ, ಹಣತೆ, ಮೊಂಬತ್ತಿಗಳನ್ನು ಸಾಲು ಸಾಲಾಗಿ ಹಚ್ಚಿ, ಪಟಾಕಿ ಸಿಡಿಸಿ ಲಕ್ಷ್ಮೀ ಪೂಜೆ ನೆರವೇರಿಸಿದರು. ನಗರದ ಅಂಗಡಿಗಳೆಲ್ಲ ಝುಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಆಕರ್ಷಿಸುತ್ತಿದ್ದವು. ಅಲ್ಲದೆ, ವಾಹನಗಳನ್ನು ವಿವಿಧ ಹೂ, ಬಾಳೆ, ಬಣ್ಣದ ಹಾಳೆ, ರಿಬ್ಬನ್​ಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ರಾಣೆಬೆನ್ನೂರ ತಾಲೂಕಿನ ದೇವರಗುಡ್ಡದ ಶ್ರೀ ಮಾಲತೇಶ, ನಗರದ ಲಕ್ಷ್ಮೀ ಮಂದಿರ, ಕಾಳಿಕಾಂಬ, ತುಳಜಾಭವಾನಿ, ಬಸವೇಶ್ವರ, ಗಣೇಶ ಗುಡಿ ಹಾಗೂ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಶ್ರೀ ಕಾಂತೇಶ ದೇವಸ್ಥಾನಗಳಲ್ಲಿ ದೇವರಿಗೆ ದೀಪಾವಳಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವರು ತಮ್ಮ ವಾಹನಗಳಿಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದು ಕಂಡು ಬಂತು.

ಹೋರಿ ಹಬ್ಬಕ್ಕೆ ಸಿದ್ಧತೆ: ದೀಪಾವಳಿಯ ಪಾಡ್ಯದಿಂದ (ಗುರುವಾರದಿಂದ) ಒಂದು ತಿಂಗಳು ಜಿಲ್ಲೆಯ ವಿವಿಧೆಡೆ ಹೋರಿ ಬೆದರಿಸುವ ಸ್ಪರ್ಧೆಗಳು ಆರಂಭವಾಗಲಿವೆ. ಹೋರಿ ಹಿಡಿಯುವವರು ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಗಳಿಗೂ ತೆರಳಿ ಶಕ್ತಿ ಪ್ರದರ್ಶಿಸುತ್ತಾರೆ. ಈ ನಿಟ್ಟಿನಲ್ಲಿ ಹೋರಿ ಸಾಕಿದವರೂ ಸಹ ಹೋರಿಗಳಿಗೆ ಸಿಂಗರಿಸಲು ಬಣ್ಣಬಣ್ಣದ ಜೂಲ್​ಗಳು, ಗೆಜ್ಜೆಸರ, ಕೊಂಬುಗಳಿಗೆ ರಿಬ್ಬನ್ ಹಾಗೂ ಬಣ್ಣಬಣ್ಣದ ಬಲೂನ್​ಗಳನ್ನು ಖರೀದಿಸುತ್ತಿದ್ದ ದೃಶ್ಯ ರಾಣೆಬೆನ್ನೂರ ನಗರದ ಎಪಿಎಂಸಿ ಕಚೇರಿ ರಸ್ತೆಯಲ್ಲಿ ಕಂಡು ಬಂದಿತು.