ಹುಟ್ಟುಹಬ್ಬದ ಸಂಭ್ರಮದಲ್ಲಿರೋ ರಾಹುಲ್​ ಡ್ರಾವಿಡ್​ ನಮ್ಮ ಹೆಮ್ಮೆ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ!

ನವದೆಹಲಿ: ಟೀಂ ಇಂಡಿಯಾ ಕಂಡ ಅದ್ಭುತ ಆಟಗಾರ ರಾಹುಲ್​ ಡ್ರಾವಿಡ್​ ಅವರಿಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಕ್ರಿಕೆಟ್​ ದಿಗ್ಗಜರು ಸೇರಿದಂತೆ ಕಿರಿಯ-ಹಿರಿಯ ಆಟಗಾರರು, ಕ್ರೀಡಾಭಿಮಾನಿಗಳು ಹಾಗೂ ಹಿತೈಷಿಗಳು ಶುಭಕೋರಿದ್ದಾರೆ.

ವಾಲ್​ ಖ್ಯಾತಿಯ ಡ್ರಾವಿಡ್ ಕ್ರಿಕೆಟ್​ ಇತಿಹಾಸದಲ್ಲಿ​ ಹಲವಾರು ದಾಖಲೆಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅಂತಹ ಕ್ರಿಕೆಟ್​ ದಿಗ್ಗಜನ ಹುಟ್ಟುಹಬ್ಬದ ದಿನವಾದ ಇಂದು ಅವರ ಬಗ್ಗೆ ತಿಳಿಯಲೇಬೇಕಾದ ಪ್ರಮುಖಾಂಶಗಳು ಹೀಗಿವೆ.

1. ಟೆಸ್ಟ್​ನಲ್ಲಿ ಹೆಚ್ಚು ಕ್ಯಾಚ್​ ಹಿಡಿದ ಆಟಗಾರ
ಡ್ರಾವಿಡ್​ ಉತ್ತಮವಾದ ಸ್ಲಿಪ್​ ವಿಭಾಗದ ಕ್ಷೇತ್ರ ರಕ್ಷಕರಾಗಿದ್ದರು. ಟೆಸ್ಟ್​ ಕೆರಿಯರ್​ನಲ್ಲಿ 164 ಪಂದ್ಯಗಳಾಡಿರುವ ರಾಹುಲ್​ 210 ಕ್ಯಾಚ್​ ಹಿಡಿದಿದ್ದಾರೆ. ವಿಕೆಟ್​ ಕೀಪರ್​ ಅಲ್ಲದ ಆಟಗಾರ ಹಿಡಿದ ಅತಿ ಹೆಚ್ಚು ಕ್ಯಾಚ್​ ದಾಖಲೆ ಇದಾಗಿದೆ.

2. ಹೆಚ್ಚು ಬಾಲ್​ ಎದುರಿಸಿದ ಆಟಗಾರ
ಟೆಸ್ಟ್​ ಮಾದರಿ ಪಂದ್ಯದಲ್ಲಿ, 16 ವರ್ಷದ ವೃತ್ತಿ ಜೀವನದಲ್ಲಿ ಹೆಚ್ಚು ಬಾಲ್​ಗಳನ್ನು ಎದುರಿಸಿದ ಆಟಗಾರ ಡ್ರಾವಿಡ್​. ಟೆಸ್ಟ್​ ಕೆರಿಯರ್​ನಲ್ಲಿ 31,258 ಎಸೆತಗಳನ್ನು ರಾಹುಲ್​ ಎದುರಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಕ್ರಿಕೆಟ್​​ ದೇವರು ಸಚಿನ್​ ಇದ್ದು, ಇವರು 29,437 ಎಸೆತಗಳನ್ನು ಎದುರಿಸಿದ್ದಾರೆ.

3. ಕ್ರೀಸ್​ನಲ್ಲಿ ಹೆಚ್ಚು ಸಮಯ ಉಳಿದ ವಾಲ್​
ಟೆಸ್ಟ್​ನಲ್ಲಿ ಪ್ರಮುಖವಾಗಿ ತಾಳ್ಮೆ ಬೇಕು ಎಂಬುದಕ್ಕೆ ವಾಲ್​ ಖ್ಯಾತಿಯ ಡ್ರಾವಿಡ್ ಮಾದರಿಯಾಗಿದ್ದರು​. ಒಟ್ಟು 735 ಗಂಟೆ 52 ನಿಮಿಷ(44,152 ನಿಮಿಷ) ಕ್ರೀಸ್​ನಲ್ಲಿ ಆಡಿದ ಕೀರ್ತಿಯನ್ನು ರಾಹುಲ್ ಗಳಿಸಿದ್ದಾರೆ.​

4. ಮೂರರ ಸ್ಥಾನದಲ್ಲಿ ಹತ್ತು ಸಾವಿರ ರನ್​ ದಾಖಲಿಸಿದ ಮೊದಲಿಗ
ಮೂರನೇ ಸ್ಥಾನದಲ್ಲಿ ಕಣಕ್ಕಿಳಿದು 10,000ಕ್ಕೂ ಹೆಚ್ಚು ರನ್​ ಗಳಿಸಿದ ಆಟಗಾರನೆಂಬ ಕೀರ್ತಿಗೆ ರಾಹುಲ್​ ಭಾಜನರಾಗಿದ್ದಾರೆ. 219 ಇನ್ನಿಂಗ್ಸ್​​ ಆಡಿರುವ ಡ್ರಾವಿಡ್​ 52.88ರ ಸರಾಸರಿಯಲ್ಲಿ 28 ಶತಕ ಹಾಗೂ 50 ಅರ್ಧಶತಕದೊಂದಿಗೆ 10,524 ರನ್​ ದಾಖಲಿಸಿದ್ದಾರೆ. 270 ವೈಯಕ್ತಿಕ ಗರಿಷ್ಠ ರನ್​ ಆಗಿದೆ.

5. 4 ಇನ್ನಿಂಗ್ಸ್​ನಲ್ಲಿ 4 ಶತಕ
ಟೆಸ್ಟ್​ ಪಂದ್ಯ 4 ಇನ್ನಿಂಗ್ಸ್​​ನಲ್ಲಿ ಸತತ 4 ಶತಕ​ ಬಾರಿಸಿದ ಭಾರತದ ಏಕೈಕ ಆಟಗಾರ ಡ್ರಾವಿಡ್​. ಇಂಗ್ಲೆಂಡ್​ ವಿರುದ್ಧ 2002ರಲ್ಲಿ ನಡೆದ ಟೆಸ್ಟ್​ನಲ್ಲಿ ಮೂರು ಇನ್ನಿಂಗ್ಸ್​ನಲ್ಲೂ 115, 148 ಹಾಗೂ 217 ರನ್​ ಗಳಿಸಿದ್ದರು. ನಂತರ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ನಲ್ಲಿ ಅಜೇಯ 100 ರನ್​​ ಗಳಿಸಿದ್ದರು.​

6. ಉತ್ತಮ ಜತೆಯಾಟಗಾರ
ರಾಹುಲ್​ ಡ್ರಾವಿಡ್ ಟೆಸ್ಟ್​ ಕ್ರಿಕೆಟ್​ನಲ್ಲಿ​ ಹೆಚ್ಚು ಜತೆಯಾಟವಾಡಿದ ಆಟಗಾರ. ಒಟ್ಟಾರೆ 32,039ರನ್ ಜತೆಯಾಟವಾಡಿದ್ದಾರೆ. ಇದರಲ್ಲಿ ಹೆಚ್ಚು ಶತಕ ಹಾಗೂ ಅರ್ಧ ಶತಕದ ಜತೆಯಾಟವನ್ನು ವಿವಿಧ ಬ್ಯಾಟ್ಸ್​ಮನ್​ಗಳೊಂದಿಗೆ ಆಡಿದ್ದಾರೆ.​ ವಿಂಡೀಸ್​ ಆಟಗಾರ ಶಿವನಾರಾಯಣ್​ ಚಂದ್ರಪಾಲ್​(750) ಜತೆಯಾಟದಲ್ಲಿ ಮೊದಲ ಸ್ಥಾನದಲ್ಲಿದ್ದು, ರಾಹುಲ್​(738) ಎರಡನೇ ಸ್ಥಾನದಲ್ಲಿದ್ದಾರೆ.

7. ಸಚಿನ್​ರೊಂದಿಗೆ ರಾಹುಲ್​ ಜುಗಲ್​ಬಂಧಿ
ಕ್ರಿಕೆಟ್​ ದೇವರು ಸಚಿನ್​ ಹಾಗೂ ವಾಲ್​ ಖ್ಯಾತಿಯ ಡ್ರಾವಿಡ್​ ಹೆಚ್ಚು ಜತೆಯಾಟದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಜತೆಯಾಟದಲ್ಲಿ ಹಲವಾರು ಶತಕಗಳನ್ನು ನೀಡಿದ್ದಾರೆ. ಇವರಿಬ್ಬರು 6,920 ರನ್ ಜತೆಯಾಟವಾಡಿದ್ದು, 20 ಶತಕಗಳನ್ನು ದಾಖಲಿಸಿದ್ದಾರೆ. ಇದು ಟೆಸ್ಟ್​ ಇತಿಹಾಸ ವಿಶ್ವದಾಖಲೆ ಆಗಿದೆ.​

8. ಏಕದಿನದಲ್ಲಿ 300 ರನ್​ ಜತೆಯಾಟ
ಎರಡು ಏಕದಿನ ಪಂದ್ಯದಲ್ಲಿ 300 ರನ್​ ಜತೆಯಾಟ ಆಡಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್. ಅಲ್ಲದೆ, ವಿಶ್ವಕಪ್​ನಲ್ಲಿ 300 ರನ್​ ಜತೆಯಾಟ ಆಡಿದ ಮೊದಲಿಗ. 1999ರ ವಿಶ್ವಕಪ್​ನಲ್ಲಿ ಸೌರವ್​ ಗಂಗೂಲಿಯೊಂದಿಗೆ ಸೇರಿ ಶ್ರೀಲಂಕಾ ವಿರುದ್ಧ 300 ರನ್​ ಜತೆಯಾಟ ನೀಡಿದ್ದರು.

9. ಟೆಸ್ಟ್​ ಆಡುವ ಎಲ್ಲ ರಾಷ್ಟ್ರಗಳಲ್ಲಿ ಶತಕ ದಾಖಲಿಸಿದ ಮೊದಲಿಗ
ಟೆಸ್ಟ್​ ಪಂದ್ಯ ಆಡುವ 10 ರಾಷ್ಟ್ರಗಳ ವಿರುದ್ಧವೂ ಶತಕ ಬಾರಿಸಿದ ಏಕೈಕ ಆಟಗಾರ ಡ್ರಾವಿಡ್​. ಇಂಗ್ಲೆಂಡ್​, ವೆಸ್ಟ್​ ಇಂಡೀಸ್​, ನ್ಯೂಜಿಲೆಂಡ್​, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಜಿಂಬಾಂಬ್ವೆ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭಾರತದ ದೇಶಿ ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ.

10. ವಿಶೇಷವಾಗಿ 22 ಬಾಲ್​ಗೆ 50 ರನ್​
ಸಾಮಾನ್ಯವಾಗಿ ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗದ ರಾಹುಲ್​ ಅವರು ಏಕದಿನ ಪಂದ್ಯದಲ್ಲಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. 2003ರಲ್ಲಿ ಹೈದರಾಬಾದಿನಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 22 ಎಸೆತಕ್ಕೆ 50 ರನ್​ ಬಾರಿಸಿದ್ದರು.

ರಾಹಲ್​ ಡ್ರಾವಿಡ್​ ಒಟ್ಟು 164 ಟೆಸ್ಟ್​ ಪಂದ್ಯಗಳನ್ನಾಡಿದ್ದು, 52.31ರ ಸರಾಸರಿಯಲ್ಲಿ 36 ಶತಕ ಮತ್ತು 63 ಅರ್ಧಶತಕಗಳೊಂದಿಗೆ 13,288 ರನ್​ ಗಳಿಸಿದ್ದಾರೆ. 344 ಏಕದಿನ ಪಂದ್ಯಗಳನ್ನು ಆಡಿರುವ ಅವರು 39.16ರನ್​ ಸರಾಸರಿಯಲ್ಲಿ 10,889 ರನ್​ ಗಳಿಸಿದ್ದಾರೆ. ಇದಲ್ಲಿ 12 ಶತಕ ಹಾಗೂ 83 ಅರ್ಧ ಶತಕಗಳನ್ನು ಹೊಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *