ಚಾಂಪಿಯನ್ ನಾಯಕ ಧೋನಿಗೆ ಜನುಮದಿನದ ಸಂಭ್ರಮ

ನವದೆಹಲಿ: ವಿಶ್ವದಾಖಲೆಯ ಒಡೆಯನಾದ ರಾಂಚಿ ಕುವರ, ಟೀಂ ಇಂಡಿಯಾದ ಮಾಸ್ಟರ್ ಮೈಂಡ್ ಮಹೇಂದ್ರ ಸಿಂಗ್ ಧೋನಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

ಗೆದ್ದಾಗ ಹಿಗ್ಗದ, ಸೋತಾಗ ಕುಗ್ಗದ ಅಪರೂಪದ ವ್ಯಕ್ತಿತ್ವದ ಧೋನಿ, ಟೀಂ ಇಂಡಿಯಾದ ಸಾರಥಿಯಾಗಿ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದರು.

15 ವರ್ಷಗಳಿಂದ ಭಾರತ ತಂಡದ ಪರ ಆಡಿ, ತಂಡದ ನಾವಿಕನಾಗಿ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಅಸಾಮಾನ್ಯ ಸಾಧಕ. ವೃತ್ತಿಜೀವನದುದ್ದಕ್ಕೂ ಘನತೆ, ಗೌರವದಿಂದ ಆಡಿ, ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನ ಉದ್ದಗಲಕ್ಕೂ ಹಾರಿಸಿದ್ದಾರೆ.

ಎಂಎಸ್‌ಡಿ ಕ್ರಿಕೆಟ್‌ನಲ್ಲಿ ಮಿಂಚಿದ್ದಲ್ಲದೆ, ಜಾಹಿರಾತು ಲೋಕದಲ್ಲೂ ಮೆರೆದರು. ಆಂಗ್ಲರ ನಾಡಿನಲ್ಲಿರುವ ಮಾಹಿ ಪತ್ನಿ ಸಾಕ್ಷಿ, ಮಗಳು ಜಿವಾ ಮತ್ತು ಕ್ರಿಕೆಟ್‌ ಆಟಗಾರರೊಂದಿಗೆ ಕೂಲ್ ಆಗಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

1981ರಲ್ಲಿ ರಾಂಚಿ ಪಟ್ಟಣದಲ್ಲಿ ಹುಟ್ಟಿದ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿಯ ಎಲ್ಲ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದುಕೊಂಡಿದೆ.