ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಹನೂರು: ಆರು ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 125 ಕಾಮಗಾರಿಗಳು ನಡೆದಿದ್ದು, 43.31 ಲಕ್ಷ ರೂ. ಅನುದಾನ ವ್ಯಯಿಸಲಾಗಿದೆ ಎಂದು ಪಿಡಿಒ ಸುರೇಶ್ ತಿಳಿಸಿದರು.

ಸೂಳೇರಿಪಾಳ್ಯ ಗ್ರಾ.ಪಂ. ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 2018-19ನೇ ಸಾಲಿನ ನರೇಗಾ ಯೋಜನೆಯ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದರು.

ನರೇಗಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವುದರ ಮೂಲಕ ಕೂಲಿ ಪಡೆಯಬಹುದಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ.

ಆದ್ದರಿಂದ ಉದ್ಯೋಗ ಪಡೆಯಬಯಸುವವರು ಗ್ರಾಮ ಪಂಚಾಯಿತಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 125 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 43,31,770 ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕು ನರೇಗಾ ಸಂಯೋಜಕ ನಾರಾಯಣ್ ಮಾತನಾಡಿ, ನರೇಗಾ ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಪ್ರತಿ ಕುಟುಂಬವೂ 100ದಿನ ಉದ್ಯೋಗವನ್ನು ಪಡೆಯಬಹುದಾಗಿದೆ. ಆದ್ದರಿಂದ ಗ್ರಾ.ಪಂ. ವ್ಯಾಪ್ತಿಯ ಪ್ರತಿ ಕುಟುಂಬವೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಇದೇ ವೇಳೆ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಗ್ರಾ.ಪಂ. ಅಧ್ಯಕ್ಷೆ ಸುಧಾಮಣಿ, ಸದಸ್ಯರು ಹಾಗೂ ಇನ್ನಿತರರಿದ್ದರು.