ಇಂದು ಮ.ಬೆಟ್ಟಕ್ಕೆ ಸಿಎಂ ಕುಮಾರಸ್ವಾಮಿ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು(ಇಂದು) ಆಗಮಿಸಲಿದ್ದು, ಪ್ರಾಧಿಕಾರದ ವಸತಿಗೃಹ ಹಾಗೂ ಸಾಲೂರು ಮಠದ ವಸತಿಗೃಹದ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಬೆಳಗ್ಗೆ 10.50ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಮ.ಬೆಟ್ಟಕ್ಕೆ ಆಗಮಿಸಲಿದ್ದು, 11.15ಕ್ಕೆ ದೇಗುಲಕ್ಕೆ ಭೇಟಿ ನೀಡುವರು. 11.30ಕ್ಕೆ ಮಲೆಮಹದೇಶ್ವರ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಜೇನುಮಲೆ ವಸತಿಗೃಹ ಹಾಗೂ 90 ಅಂಗಡಿ ಮಳಿಗೆಗಳನ್ನು ಉದ್ಘಾಟಿಸುವರು. 11.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವರು.

ಮಧ್ಯಾಹ್ನ 12ಕ್ಕೆ ಸುತ್ತೂರು ಮಠದ ವತಿಯಿಂದ ನಿರ್ಮಿಸಿರುವ ಅತಿಥಿಗೃಹವನ್ನು ಉದ್ಘಾಟಿಸುವರು. 2.30ಕ್ಕೆ ನಾಗಮಲೆ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ 2018-19ನೇ ಸಾಲಿನ ಪ್ರಥಮ ಸಭೆಯನ್ನು ನಡೆಸುವರು. 3.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಮ.ಬೆಟ್ಟದಿಂದ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ತಿಳಿಸಿರುತ್ತಾರೆ.

ವಸತಿ ಗೃಹದ ಉದ್ಘಾಟನೆ: ಮ.ಬೆಟ್ಟದಲ್ಲಿ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಜೇನುಮಲೆ ವಸತಿ ಗೃಹದ ಕಟ್ಟಡ ಹಾಗೂ 90 ಅಂಗಡಿ ಮಳಿಗೆಗಳನ್ನು ನ.30ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಿರುವ ಜೇನುಮಲೆ ವಸತಿ ಗೃಹದ ಕಟ್ಟಡವನ್ನು ಸಾಲೂರು ಮಠಾಧ್ಯಕ್ಷ ಶ್ರೀ ಗುರುಸ್ವಾಮೀಜಿ ಸಾನ್ನಿಧ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಆರ್.ನರೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ್, ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ಎನ್.ಮಹೇಶ್, ನಿರಂಜನ್ ಕುಮಾರ್, ಜಿಪಂ ಅಧ್ಯಕ್ಷೆ ಶಿವಮ್ಮ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ ತಿಳಿಸಿದ್ದಾರೆ.