ಜನಸಂಪರ್ಕ ಸಭೆಯಲ್ಲಿ ದೂರುಗಳ ಸುರಿಮಳೆ

ಹನೂರು: ಪಟ್ಟಣದ ಸೆಸ್ಕ್ ಉಪವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದವು.

ರೈತ ಸಂಘದ ಹನೂರು ಘಟಕಾಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಕ್ಷೇತ್ರದ ಕೆಲವು ಗ್ರಾಮಗಳಿಗೆ ನಿರಂತರ ಜ್ಯೋತಿ ಮಂಜೂರಾಗಿಲ್ಲ. ಇದರಿಂದ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ, ಕೆಲವು ಗ್ರಾಮದಲ್ಲಿ ಈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ವಿಳಂಬ ಗತಿಯಲ್ಲಿ ಸಾಗುತ್ತಿವೆ. ಉದ್ದನೂರು ಗ್ರಾಮವು ಮಾದರಿ ವಿದ್ಯುತ್ ಗ್ರಾಮಕ್ಕೆ ಆಯ್ಕೆಯಾಗಿ 4 ತಿಂಗಳು ಕಳೆದಿದೆ. ಆದರೆ, ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಜತೆಗೆ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಮಸ್ಯೆ ಇದೆ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಅಧೀಕ್ಷಕ ಇಂಜಿನಿಯರ್ ಉಮೇಶ್ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ಬಹುತೇಕ ಗ್ರಾಮಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲಾಗಿದೆ. ಹೂಗ್ಯಂ, ಗಾಜನೂರು, ಮೀಣ್ಯಂ ಸೇರಿದಂತೆ ಇನ್ನು ಕೆಲವು ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನಲ್ಲಿ 5 ಗ್ರಾಮಗಳು ಮಾದರಿ ವಿದ್ಯುತ್ ಗ್ರಾಮಕ್ಕೆ ಆಯ್ಕೆಯಾಗಿದ್ದು, ಕಾಮಗಾರಿ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.

ಅಧಿಕಾರಿ ಮುಂದೆ ವಿಷ ಇಟ್ಟ ರೈತ
ಶಾಗ್ಯ ಗ್ರಾಮದ ವೀರಪ್ಪ ಎಂಬುವರು ಸಭೆಯಲ್ಲಿ ಅಧಿಕಾರಿಗಳ ಮುಂದೆ ವಿಷದ ಬಾಟಲಿ ಇಟ್ಟು ಮಾತನಾಡಿ, ಜಮೀನಿಗೆ ವಿದ್ಯುತ್ ಸಂಪರ್ಕ ಕಲಿಸಬೇಕೆಂದು ನಿಗಮಕ್ಕೆ ಹಣ ಪಾವತಿಸಿ 8 ವರ್ಷ ಕಳೆದಿದೆ. ಆದರೆ ನಿಗಮವು ಕಂಬಗಳನ್ನು ಮಾತ್ರ ಅವಳವಡಿಸಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲಿಲ್ಲ. ಇದರಿಂದ ಕೃಷಿಗೆ ತೊಂದರೆಯಾಗಿದೆಯಲ್ಲದೇ ಜಾನುವಾರುಗಳು ನೀರಿಲ್ಲದೇ ಸೊರಗುತ್ತಿದ್ದು, ಅವುಗಳಿಗೆ ವಿಷ ಕೊಟ್ಟು ಸಾಯಿಸಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅಧೀಕ್ಷಕ ಇಂಜಿನಿಯರ್ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಿಯಾಯೋಜನೆ ತಯಾರಿಸುವುದರ ಮೂಲಕ ಒಂದು ವಾರದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹನೂರಿನ ಕರವೇ ಅಧ್ಯಕ್ಷ ವಿನೋದ್ ಮಾತನಾಡಿ, ಈಗಾಗಲೇ ಹಲವು ಜನಸಂಪರ್ಕ ಸಭೆಗಳನ್ನು ನಡೆಸಲಾಗಿದ್ದು, ನೀಡಿರುವ ದೂರುಗಳಲ್ಲಿ ಬಹುತೇಕ ದೂರುಗಳನ್ನು ಪರಿಹರಿಸಿಲ್ಲ. ಇದರಿಂದ ರೈತರು ತೊಂದರೆಪಡುವಂತಾಗಿದೆ. ಹಾಗಾಗಿ ನೀಡಿರುವ ದೂರುಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.

ಅಧೀಕ್ಷಕ ಉಮೇಶ್ ಜನಸಂಪರ್ಕ ಸಭೆಯಲ್ಲಿ ನೀಡಿರುವ ದೂರುಗಳನ್ನು ಪರಿಹರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ತಾರಾ, ಪ್ರದೀಪ್, ಎಇಇ ಲಿಂಗರಾಜು, ಲೆಕ್ಕಾಧೀಕ್ಷಕ ರಾಜನ್ ಹಾಗೂ ನಿಗಮದ ಇಂಜಿನಿಯರ್‌ಗಳು, ನೌಕರರು ಹಾಜರಿದ್ದರು.